ಧಾರವಾಡ:
ಜಿಲ್ಲೆಯಲ್ಲಿ ಹೊರಗುತ್ತಿಗೆ ಏಜನ್ಸಿ ರದ್ದು ಮಾಡಿ ಬೀದರ್ ಸೊಸೈಟಿ ಮಾದರಿ ಜಾರಿಗೆ ತರುವುದು, ಕಾರ್ಮಿಕರಿಗೆ ಶಾಸನಬದ್ಧ ಹಕ್ಕುಗಳನ್ನು ಖಾತ್ರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಹಾಸ್ಟೆಲ್ ಕಾರ್ಮಿಕರ ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಹೊರಗುತ್ತಿಗೆ ಏಜನ್ಸಿಯನ್ನು ರದ್ದುಗೊಳಿಸಿ ಬೀದರ್ ಸೊಸೈಟಿ ಮಾದರಿಯನ್ನು 2024ರ ಅಕ್ಟೋಬರ್ 1ರ ಆದೇಶದಂತೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಕಾರ್ಮಿಕ ಸಚಿವರ ತವರು ಜಿಲ್ಲೆಯಾದ ಧಾರವಾಡದಲ್ಲಿ ಜಾರಿಗೊಳಿಸಬೇಕಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಾರ್ಮಿಕ ಆಯುಕ್ತರಿಗೂ ಮನವಿ ಪತ್ರ ನೀಡಿ ಚರ್ಚಿಸಲಾಗಿತ್ತು. ಆದರೆ, ಈ ಪ್ರಕ್ರಿಯೆ ಬೈಲಾ ರಚನೆ ಹಂತದಲ್ಲಿದ್ದು ಇನ್ನೂ ಆಮೆಗತಿಯಲ್ಲೇ ನಡೆಯುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಆಗಲೇ ಅಂತಿಮ ಹಂತಕ್ಕೆ ಪ್ರಕ್ರಿಯೆ ಬಂದಿದೆ. ಆದ್ದರಿಂದ ಕೂಡಲೇ ಜಿಲ್ಲೆಯಲ್ಲಿ ಹೊರಗುತ್ತಿಗೆ ಏಜನ್ಸಿಯನ್ನು ಕೂಡಲೇ ರದ್ದುಪಡಿಸಿ ಹಾಸ್ಟೆಲ್ ಗುತ್ತಿಗೆ ಕಾರ್ಮಿಕರನ್ನು ಕೂಡಲೇ ಸೊಸೈಟಿ ಮಾದರಿಗೆ ಒಳಪಡಿಬೇಕು ಎಂದರು.
ಜತೆಗೆ ಕೂಡಲೇ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ವೇತನ, ಪಿಎಫ್, ಇಎಸ್‌ಐ ಪಾವತಿಯಲ್ಲಿನ ಸಮಸ್ಯೆಗಳು, ರಜೆ, 8 ಗಂಟೆ ಕೆಲಸ ಇತ್ಯಾದಿ ಶಾಸನಬದ್ಧ ಹಕ್ಕುಗಳ ಜಾರಿಗಾಗಿ ಸೇರಿದಂತೆ ಇತರೆ ಕುಂದು-ಕೊರತೆ ನಿವಾರಿಸಲು ಜಿಪಂ ಸಿಇಓ ಸಮ್ಮುಖದಲ್ಲಿ ಸಂಘದ ಪದಾಧಿಕಾರಗಳೊಂದಿಗೆ ಸಭೆ ಕರೆಯಬೇಕೆಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶೈನಾಜ್ ಹುಡೇದಮನಿ, ಕಾರ್ಯದರ್ಶಿ ಗಂಗಮ್ಮ ನಾಗನಾಯಕ, ಪದ್ಮ ಪತ್ತಾರ ಸೇರಿದಂತೆ ಹಲವರಿದ್ದರು.
ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವನೆಗೆ ವಿರೋಧಧಾರವಾಡ:
ಕರ್ನಾಟಕ ಹೈಕೋರ್ಟ್‌ನ ಕೆಲ ನ್ಯಾಯಮೂರ್ತಿಗಳನ್ನು ಇತರ ಹೈಕೋರ್ಟ್‌ಗಳಿಗೆ ವರ್ಗಾಯಿಸುವ ಉದ್ದೇಶಿತ ಅಥವಾ ಪ್ರಸ್ತಾವಿತ ತೀರ್ಮಾನಗಳ ಬಗ್ಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ವಕೀಲರ ಸಂಘದಿಂದ ವಿರೋಧ ವ್ಯಕ್ತವಾಗಿದೆ.ರಾಜ್ಯ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವು ಅತ್ಯುತ್ತಮ ಕಾನೂನು ತಜ್ಞರು, ನ್ಯಾಯಮೂರ್ತಿಗಳನ್ನು ವರ್ಗಾಯಿಸಲು ಉದ್ದೇಶಿಸಲಾಗಿದೆ. ಇದನ್ನು ನಂಬಲಾಗುತ್ತಿಲ್ಲ. ನ್ಯಾಯಮೂರ್ತಿಗಳು ಕೃಷ್ಣ ದೀಕ್ಷಿತ್, ಕೆ. ನಟರಾಜನ್, ಹೇಮಂತ್ ಚಂದನಗೌಡರ್ ಹಾಗೂ ಸಂಜಯ್ ಗೌಡ ಅವರನ್ನು ಇತರ ಹೈಕೋರ್ಟ್‌ಗಳಿಗೆ ವರ್ಗಾಯಿಸುವ ಪ್ರಸ್ತಾವನೆಯಿದೆ ಎಂಬ ಮಾಹಿತಿ ಇದೆ. ಈ ನ್ಯಾಯಮೂರ್ತಿಗಳ ನಿಸ್ವಾರ್ಥ ಸೇವೆ, ನೈತಿಕತೆ, ಅನನ್ಯ, ಕಾನೂನು ಪರಿಣಿತಿ, ಸಹಾನುಭೂತಿ ಮತ್ತು ಕಾರ್ಯಕ್ಷಮತೆಗಳ ಕುರಿತು ಪ್ರಶ್ನೆಯೇ ಇಲ್ಲ. ಇಂತಹ ಕಾನೂನು ತಜ್ಞರನ್ನು ವರ್ಗಾಯಿಸುವ ಪ್ರಸ್ತಾವನೆ ಕೇಳಿ ತಮಗೆ ನಿರಾಸೆಯಾಗಿದೆ. ಕೂಡಲೇ ವರ್ಗಾವಣೆಯ ಪ್ರಸ್ತಾವನೆಗೆ ಕೈ ಬಿಡಬೇಕು ಎಂದು ಧಾರವಾಡ ಪೀಠದ ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಶೀಲವಂತ ಸೇರಿದಂತೆ ಪದಾಧಿಕಾರಿಗಳು ಹಾಗೂ ಹಿರಿಯ ನ್ಯಾಯವಾದಿಗಳು ಭಾರತದ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.