ವಿಬಿ ಜಿ ರಾಮ್‌ಜಿ ಕನಿಷ್ಠ ಕೂಲಿ ₹424ಕ್ಕೆ ಹೆಚ್ಚಿಸಲು ಆಗ್ರಹ

KannadaprabhaNewsNetwork |  
Published : Oct 19, 2026, 02:45 AM IST
ಕಂಪ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಭಾಗದ ಬಡವರು ಮತ್ತು ಕೂಲಿಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಕಂಪ್ಲಿ: ವಿಬಿ ಜಿ ರಾಮ್‌ಜಿ ಯೋಜನೆಯಡಿ ಕಾರ್ಮಿಕರಿಗೆ ನೀಡುವ ಕನಿಷ್ಠ ಕೂಲಿ ದಿನಕ್ಕೆ ₹424ಕ್ಕೆ ಹೆಚ್ಚಿಸಬೇಕು. ಬಾಕಿ ಉಳಿಸಿಕೊಂಡಿರುವ ಕೂಲಿ ಮತ್ತು ಪಿಂಚಣಿ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಒತ್ತಾಯಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ರ‍್ಯಾಲಿ ಮೂಲಕ ತೆರಳಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಸ್ವಾಮಿ, ಬರಗಾಲದ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನರು ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನ 200ಕ್ಕೆ ಹೆಚ್ಚಿಸಬೇಕು. ಕಾರ್ಮಿಕರಿಗೆ ದಿನಕ್ಕೆ ₹424 ಕನಿಷ್ಠ ಕೂಲಿ ನೀಡುವ ಮೂಲಕ ಜೀವನ ನಿರ್ವಹಣೆಗೆ ನೆರವಾಗಬೇಕು. ಈಗಾಗಲೇ ದುಡಿದ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ ಕೂಲಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬರಗಾಲದಿಂದ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಗ್ರಾಮೀಣ ಭಾಗದ ಬಡವರು ಮತ್ತು ಕೂಲಿಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವಿಮುಕ್ತ ದೇವದಾಸಿ ಮಹಿಳೆಯರು ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಸರ್ಕಾರದಿಂದ ಬರಬೇಕಾದ ಪಿಂಚಣಿ ಬಾಕಿ ಉಳಿದಿದೆ.ಇದರಿಂದ ಕುಟುಂಬ ನಿರ್ವಹಣೆ ಕಷ್ಟ ಅನೇಕರು ದುಡಿಮೆ ಅರಸಿ ಬೇರೆಡೆಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಾಕಿ ಪಿಂಚಣಿ ಕೂಡಲೇ ಪಾವತಿಸಿ, ಅರ್ಹರಿಗೆ ಪ್ರತಿ ತಿಂಗಳು ನಿಯಮಿತವಾಗಿ ಪಿಂಚಣಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಪರಿಹಾರ, ಸಾಲಮನ್ನಾಕ್ಕೆ ಒತ್ತಾಯ: ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪ್ರತಿ ಎಕರೆಗೆ ₹20 ಸಾವಿರ ಪರಿಹಾರ ನೀಡಬೇಕು. ವಿಮುಕ್ತ ದೇವದಾಸಿ ಮಹಿಳೆಯರು, ಒಂಟಿ ಮಹಿಳೆಯರು, ಮಸಣ ಕಾರ್ಮಿಕರು ಸೇರಿದಂತೆ ಎಲ್ಲ ಕೂಲಿಕಾರ್ಮಿಕರು ಹಾಗೂ ರೈತರು ಪಡೆದಿರುವ ಖಾಸಗಿ ಸಾಲ ಮನ್ನಾ ಮಾಡಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ನೆರವು ನೀಡುವ ಮೂಲಕ ಅವರ ಬದುಕಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಮಳೆಗಾಲದವರೆಗೆ ರಾಜ್ಯದ ಪ್ರತಿ ಪಡಿತರ ಚೀಟಿದಾರರಿಗೂ ಐದು ಕೆಜಿ ಅಕ್ಕಿ, ಮೂರು ಕೆಜಿ ಜೋಳ, ಒಂದು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಬೆಲ್ಲ ಸೇರಿದಂತೆ ಒಟ್ಟು 14 ಅಗತ್ಯ ವಸ್ತು ಉಚಿತವಾಗಿ ವಿತರಿಸಬೇಕು. ಇದರಿಂದ ಬಡ ಮತ್ತು ಕೂಲಿಕಾರ್ಮಿಕ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಮಸಣ ಕಾರ್ಮಿಕರ ಪಿಂಚಣಿ ಹೆಚ್ಚಳಕ್ಕೆ ಬೇಡಿಕೆ: 45 ವರ್ಷ ಮೇಲ್ಪಟ್ಟ ಮಸಣ ಕಾರ್ಮಿಕರಿಗೆ ನೀಡುವ ಮಾಸಿಕ ಪಿಂಚಣಿ ₹6 ಸಾವಿರಕ್ಕೆ ಹೆಚ್ಚಿಸಬೇಕು. ವಿಮುಕ್ತ ದೇವದಾಸಿ ಮಹಿಳೆಯರು, ಒಂಟಿ ಮಹಿಳೆಯರು ಹಾಗೂ ಕುಟುಂಬಗಳ ಸಮಗ್ರ ಗಣತಿ ನಡೆಸಿ ಅರ್ಹ ಫಲಾನುಭವಿ ಗುರುತಿಸಬೇಕು. ಈ ಮೂಲಕ ಸರ್ಕಾರದ ಸೌಲಭ್ಯ ಅರ್ಹರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಅರಣ್ಯ ಮತ್ತು ಸರ್ಕಾರಿ ಭೂಮಿಗಳಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆ ಅಂತಹ ಅರ್ಹ ರೈತರಿಗೆ ಕಾನೂನುಬದ್ಧವಾಗಿ ಹಕ್ಕುಪತ್ರ ವಿತರಿಸಬೇಕು. ಭೂಮಿಯ ಹಕ್ಕು ದೊರೆತರೆ ರೈತರು ನೆಮ್ಮದಿಯಿಂದ ಕೃಷಿ ಮಾಡಲು ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.

ಸಂಘದ ತಾಲೂಕಾಧ್ಯಕ್ಷೆ ದುರುಗಮ್ಮ ಮಾತನಾಡಿ, ವಿಮುಕ್ತ ದೇವದಾಸಿ ಮಹಿಳೆಯರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಆರ್ಥಿಕವಾಗಿ ಹಿಂದುಳಿದಿರುವ ಈ ಕುಟುಂಬಗಳ ಮಕ್ಕಳ ಭವಿಷ್ಯಕ್ಕೆ ಅಗತ್ಯ ನೆರವು ಒದಗಿಸಬೇಕು. ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು ಪಿಂಚಣಿ ಸಕಾಲದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಮಸಣ ಕಾರ್ಮಿಕರ ಸಮಗ್ರ ಗಣತಿ ನಡೆಸಿ ಅವರನ್ನು ಸರ್ಕಾರದ ಸೌಲಭ್ಯಗಳ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ವೀರೇಶ್, ಕರ್ರಮ್ಮ, ಹುಲಿಗೆಮ್ಮ, ಸುಮಂಗಳಾ, ರೆರೆಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನದಿಂದ ಪ್ರೌಢ ವ್ಯಕ್ತಿತ್ವ ರೂಪು: ರಮೇಶ್ ಭಟ್ ಎಸ್.ಜಿ
ನಾಪೋಕ್ಲು ಸುತ್ತಮುತ್ತ ಬಿರುಸಿನ ಮಳೆ: ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡಚಣೆ