ನೀರಾವರಿ ಸಲಹಾ ಸಮಿತಿ ಸಭೆಗೆ ರೈತರನ್ನು ಆಹ್ವಾನಿಸಲು ಆಗ್ರಹ

KannadaprabhaNewsNetwork |  
Published : Jun 27, 2024, 01:05 AM IST
ಕೊಡೇಕಲ್ ಸಮೀಪದ ನಾರಾಯಣಪುರ ಗ್ರಾಮದ ಕೆಬಿಜೆಎನ್‌ಎಲ್‌ನ ಮುಖ್ಯ ಅಭಿಯಂತರ ಕಚೇರಿ ಮುಂದೆ ಕಾಲುವೆ ಜಾಲಗಳ ನಿರ್ವಹಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ ಮುಖಂಡರು ಮುಖ್ಯ ಅಭಿಯಂತರ ಆರ್. ಮಂಜುನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ನೀರಾವರಿ ಸಲಹಾ ಸಮಿತಿ ಸಭೆಗೆ ರೈತರು ಹಾಗೂ ರೈತ ಸಂಘದವರನ್ನು ಕರೆಯದೆ ಕೇವಲ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರ್ಧಾರ ಕೈಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ರೈತ ಸಂಘವನ್ನು ಕಡೆಗಣಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಕೊಡೇಕಲ್

ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಸಮಯದಲ್ಲಿ ನಡೆಸುವ ನೀರಾವರಿ ಸಲಹಾ ಸಮಿತಿ ಸಭೆಗೆ ರೈತರು ಹಾಗೂ ರೈತ ಸಂಘದವರನ್ನು ಕರೆಯದೆ ಕೇವಲ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಿರ್ಧಾರ ಕೈಗೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ರೈತ ಸಂಘವನ್ನು ಕಡೆಗಣಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಣಸಗಿ ಘಟಕದ ಅಧ್ಯಕ್ಷ ಹಣಮಗೌಡ ನಾರಾಯಣಪುರ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ನಾರಾಯಣಪುರ ಗ್ರಾಮದ ಕೆಬಿಜೆಎನ್‌ಎಲ್‌ನ ಮುಖ್ಯ ಅಭಿಯಂತರ ಕಚೇರಿ ಮುಂದೆ ಕಾಲುವೆ ಜಾಲಗಳ ನಿರ್ವಹಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರೈತ ಸಂಘದಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ರೈತರ ಜೀವನಾಡಿ ಬಸವಸಾಗರ ಜಲಾಶಯಕ್ಕೆ ನೀರಿನ ಒಳ ಹರಿವು ಉಂಟಾಗುತ್ತಿದ್ದು ಜುಲೈ ಮಧ್ಯದಲ್ಲಿ ಕಾಲುವೆ ನೀರು ಹರಿಸುವ ಸಾಧ್ಯತೆಗಳಿದ್ದರೂ ಕೂಡಾ ಕಳೆದೆರಡು ವರ್ಷಗಳಿಂದ ಕೃಷ್ಣಾ ಎಡದಂಡೆ ಮತ್ತು ಬಲದಂಡೆಗಳ ಮುಖ್ಯ ಕಾಲುವೆ ಜಾಲ ಸೇರಿ ಉಪ ಕಾಲುವೆ ಜಾಲಗಳ ನಿರ್ವಹಣೆ ಮಾಡಿಲ್ಲ. ಅನುದಾನ ಕೊರತೆ ನೆಪ ಹೇಳಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಲುವೆ ಜಾಲಗಳಲ್ಲಿ ಮುಳ್ಳು ಕಂಟಿ ಗಿಡಗಳು ಬೆಳೆದು ಸೇವಾ ರಸ್ತೆಗಳಲ್ಲಿ ರೈತರು ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಉಪ ಕಾಲುವೆಗಳಲ್ಲಿ ಹಲವು ರೀತಿಯ ತ್ಯಾಜ್ಯಗಳು ಕೂಡಿಕೊಂಡು ಕೊನೆಯ ಭಾಗದ ರೈತ ಜಮೀನುಗಳಿಗೆ ನೀರು ಸಿಗದಂತೆ ಆಗಿದೆ ಇದರಿಂದಾಗಿ ಕೃಷ್ಣಾ ಅಚ್ಚು ಕಟ್ಟು ಪ್ರದೇಶದ ರೈತರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಹೇಳಿದರು.

ಪ್ರತಿ ವರ್ಷ ಎರಡು ಬಾರಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಗೆ ರೈತ ಮುಖಂಡರನ್ನಾಗಲೀ, ಇಲ್ಲವೇ ರೈತ ಸಂಘದವರನ್ನಾಗಲಿ ಕರೆಯದೆ ನಿಗಮದ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದು ಇದನ್ನು ರೈತ ಸಂಘ ಖಂಡಿಸುತ್ತದೆ ಎಂದು ಹೇಳಿದರು.

ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ ನಾಯಕ ಮಾತನಾಡಿ, ನಿಗಮದ ಕಚೇರಿಯಲ್ಲಿ ನಿವೃತ್ತರಾಗಿರುವ ಹುದ್ದೆಗಳಿಗೆ ಮರು ನೇಮಕಾತಿ ಮಾಡಿಕೊಳ್ಳಬೇಕು, ಕೆಲವು ಕಡೆಗಳಲ್ಲಿ ಕೆಟ್ಟು ಹೋಗಿರುವ ಸ್ವಯಂ ಚಾಲಿತ ಗೇಟುಗಳ ದುರಸ್ತಿ ಮಾಡಬೇಕು, ಜಂಗಿನಗಡ್ಡಿ ಮತ್ತು ಮೇಲಿನಗಡ್ಡಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ದೊರಕಿಸುವ ಸಲುವಾಗಿ ಹೊಸ ಕಾಲುವೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಬೋನಾಳ ಏತ ನೀರಾವರಿ ಕಾರ್ಯವನ್ನು ಕಕ್ಕೇರಾ ಉಪವಿಭಾಗಕ್ಕೆ ಸೇರ್ಪಡೆ ಮಾಡಿರುವುದರಿಂದ ರೈತರಿಗೆ ಕಾರ್ಯನಿಮಿತ್ತ ಹೋಗಿ ಬರಲು ತೊಂದರೆಯಾಗುತ್ತಿದ್ದು, ಕೂಡಲೆ ಬೋನಾಳ ಏತನೀರಾವರಿ ಕಾರ್ಯಕ್ಷೇತ್ರ ಹಸನಾಪೂರ ಉಪ ವಿಬಾಗ ಕಚೇರಿಗೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘ ಹಸಿರು ಸೇನೆಯ ಸುರಪುರ ಘಟಕದ ಅಧ್ಯಕ್ಷ ಹನುಮಂತ್ರಾಯ ಚಂದ್ಲಾಪೂರ ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ನಾರಾಯಣಪುರ ಗ್ರಾಮದ ಮಹರ್ಷಿ ವಾಲ್ಮೀಕಿ ವೃತ್ತದಿಂದ ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ಸರ್ಕಾರ ಮತ್ತು ನಿಗಮದ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗುತ್ತಾ, ನಿಗಮದ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯ ಅಭಿಯಂತರ ಆರ್. ಮಂಜುನಾಥ ರೈತರ ಬೇಡಿಕೆಗಳನ್ನು ಸಮಾಧಾನದಿಂದ ಆಲಿಸಿ, ಮನವಿ ಪತ್ರವನ್ನು ಸ್ವಿಕರಿಸಿ, ಬೇಡಿಕೆಗಳನ್ನು ಸರ್ಕಾರ ಹಾಗೂ ನಿಗಮದ ಎಂಡಿ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡರಾದ ರೈತ ಸಂಘದ ಉಪಾಧ್ಯಕ್ಷ ಗದ್ದೆಪ್ಪ ನಾಗಬೇನಾಳ, ಸಾಹೇಬಗೌಡ ಮದಲಿಂಗನಾಳ, ತಿಪ್ಪಣ್ಣ ಜಂಪಾ, ನಿಂಗನಗೌಡ ಗುಳಬಾಳ, ಅಂಬರೀಶ ಕಾಮಕೇರಿ, ಮಲ್ಲಣ್ಣ ಹಾಲಭಾವಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ