ಸಂದೀಪ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಒತ್ತಾಯ

KannadaprabhaNewsNetwork | Published : Feb 17, 2025 12:31 AM

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯಕರ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯಕರ್ತರ ಪ್ರತಿಭಟನೆ, ಜಿಲ್ಲಾಡಳಿತಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ವಾರ್ಡ್ ನಂ.8 ಸಂದೀಪ ನಗರದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುವ ನಿವಾಸಿಗಳಿಗೆ ಜಾಗೆ ಖಾಯಂಗೊಳಿಸಿ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕಾರ್ಯಕರ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ 8ನೇ ವಾರ್ಡ್ ಸಂದೀಪ ನಗರದಲ್ಲಿ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ 100ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ, ಸದರಿ ಜಾಗಗಳನ್ನು ಬೇರೆಯವರ ಹೆಸರಿಗೆ ಹಕ್ಕು ಪತ್ರಗಳನ್ನು ನೀಡುವ ಹುನ್ನಾರ ನಡೆದಿದೆ. ಇದರಿಂದ ಅಲ್ಲಿ ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ವಾಸವಿರುವ ಕುಟುಂಬಗಳಿಗೆ ತೀವ್ರ ಅನ್ಯಾಯವಾಗಲಿದೆ. ಆದ ಕಾರಣ ಸರ್ಕಾರಿ ಜಾಗೆಯಲ್ಲಿ ಸೂರೇ ಇಲ್ಲದ ನಿರ್ಗತಿಕರಾದ ಅಲ್ಲಿನ ನಿವಾಸಿಗಳಿಗೆ ಅನ್ಯಾಯವಾಗಲಿದೆ ಎಂದರು.

ಈ ಕುರಿತು ಸಮಗ್ರ ಪರಿಶೀಲನೆ ನಡೆಸುವ ಮೂಲಕ ಅಲ್ಲಿ ನೆಲೆಸಿರುವ ಕಡು ಬಡವರಿಗೆ ನ್ಯಾಯ ಒದಗಿಸಬೇಕು. ಈ ಕುರಿತು ಸ್ಥಳೀಯ ತಹಸೀಲ್ದಾರಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಸಂಘಟನೆಯ ಪ್ರಮುಖರಾದ ಮಹಾಂತೇಶ ಅಮರಾವತಿ, ಯಮನೂರಪ್ಪ ಕೋಮಾರ, ಸಿದ್ದಪ್ಪ ಕಲಾಲಬಂಡಿ, ಮರಿಯಪ್ಪ ಹಕ್ಕಲ, ಮಳಿಯಪ್ಪ ಬಡಿಗೇರ, ದುರಗೇಶ ದೊಡ್ಡಮನಿ, ಮಹೇಶ ಹಿರೇಮನಿ, ರೇಣುಕವ್ವ, ಬೀಬಿಜಾನ ಬೇಪಾರಿ, ಶಿವನಮ್ಮ ಹಿರೇಮನಿ, ಮುದುಕವ್ವ ಹಿರೇಮನಿ, ಅಂಜವ್ವ ಮಾದರ, ದುರುಗವ್ವ ಗುಳಗುಳಿ, ಬಸವರಾಜ ಅರಗಂಜಿ, ಗಾಳೆಪ್ಪ ಮುತ್ತಾಳ, ದುರಗಪ್ಪ ಜಾಲಿಮರದ, ಸೇರಿದಂತೆ ಅನೇಕರು ಇದ್ದರು.

Share this article