ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಭಿಮತ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಳಮೀಸಲಾತಿ ಕೊಡಬೇಕೇ ಬೇಡವೇ ಎಂಬ ಚರ್ಚೆಯೇ ಅಪ್ರಸ್ತುತ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.ನಗರದ ಕೋಟೆ ನಾಡು ಬುದ್ದ ವಿಹಾರದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಹಾಗೂ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಮುಂದಿರುವ ಸವಾಲುಗಳು ಮತ್ತು ಸಾಧ್ಯತೆಗಳು ಎಂಬ ಚರ್ಚಾ ವಿಷಯ ಕುರಿತು ಮಾತನಾಡಿದರು.
ಜಸ್ಟೀಸ್ ನಾಗಮೋಹನ್ ದಾಸ್ ಅವರೇ ಹಸಿದವರು ಕಾಯುವುದಕ್ಕೆ ಆಗುವುದಿಲ್ಲ ಊಟ ಮಾಡುವವರು ಕಾಯುತ್ತಾರೆ. ಈ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ್ದು, ನಮ್ಮ ಆಯೋಗ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದ್ದಾರೆ. ಎಲ್ಲಿಯವರೆಗೆ ಜಾತಿ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಎಲ್ಲಿಯವರೆಗೆ ಮೀಸಲಾತಿ ಇರುತ್ತೋ ಅಲ್ಲಿಯವರೆಗೆ ಒಳ ಮೀಸಲಾತಿ ಇರಬೇಕು. ಎಂಬ ಸತ್ಯವನ್ನು ಅರಿತಿರುವ ಆಯೋಗವು ಒಳಮೀಸಲಾತಿ ಹಂಚಿಕೆ ಮಾಡುವ ಮೂಲಕ ಪರಿಶಿಷ್ಠ ಜಾತಿಗಳಲ್ಲಿನ ಸಂಘರ್ಷ ತಪ್ಪಿಸಲು ಬದ್ದವಾಗಿರುವುದು ಖಚಿತಪಡಿಸಿದೆ ಎಂದರು.ಕೆಲವು ಕಡೆ ಎಕೆ-ಎಡಿ ಹಾಗೂ ಎಡಿ-ಎಕೆಗಳಾಗಿದ್ದಾರೆ. ಇದನ್ನು ಸರಿಪಡಿಸುವುದು ತುಂಬಾ ಕಷ್ಟವೆಂದೂ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ನಿಗದಿತ ಅವಧಿಯೊಳಗೆ ಮಾದಿಗ ಸಮಾಜದ ಜಾತಿಗಳು ಒಂದು ಕಡೆ, ಛಲವಾದಿ ಜಾತಿಗಳು ಒಂದು ಕಡೆಯೆಂದು ನಮೂದಿಸುವಂತೆ ಸರಕಾರವು ಇಲಾಖೆ ಮೂಲಕ ಅಧಿಸೂಚನೆ ನೀಡಿದರೆ ಕೆಪಿಎಸ್‌ಸಿ ಹಾಗೂ ಇತರೆ ಇಲಾಖೆ ಮೂಲಕ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಮಾದಿಗ ಸಂಬಂಧಿತ 29 ಜಾತಿಗಳಲ್ಲಿ ತ್ರಿಮತಸ್ಥ ಗುಂಪುಗಳಾದ ಡೋಹರ, ಮೋಚಿ, ಸಮಗಾರ, ಹರಳಯ್ಯ, ದಕ್ಕಲಿಗ ಜಾತಿಗಳು ಪ್ರತ್ಯೇಕ ಮೀಸಲಾತಿಗಾಗಿ ಈ ಹಿಂದೆ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಇತ್ತೀಚಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಮಾದಿಗ ಸಂಬಂಧಿತ ಜಾತಿಗಳ ಸಮವರ್ಧನ ಸಭೆಯಲ್ಲಿ ಈ ಎಲ್ಲಾ ಜಾತಿಗಳು ಮಾದಿಗ ಜಾತಿಯು ಹಿರಿಯಣ್ಣನಂತೆ ಇದ್ದು, ನಾವೆಲ್ಲಾರು ಚರ್ಮಕಾರರಾಗಿದ್ದು, ಮಾದಿಗರ ಗುಂಪಿನಲ್ಲಿಯೇ ಮುಂದುವರೆಯುವುದಾಗಿ ಜಸ್ಟೀಸ್ ನಾಗ್ ಮೋಹನ್ ದಾಸ್ ಅವರಿಗೆ ಅಖಂಡ ಸಭೆಯಲ್ಲಿ ಮನವಿ ಸಲ್ಲಿಸಿ, ಒಗ್ಗಟ್ಟು ಪ್ರದರ್ಶಿಸಿದ್ದು, ಮಾದಿಗರಲ್ಲಿನ ಆಂತರಿಕ ಸಂಘರ್ಷ ಕೊನೆಗೊಂಡಂತಾಗಿದೆ ಎಂದರು.ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳ ಈ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಮೋದಿ ಅವರು ಸಹ ಒಳಮೀಸಲಾತಿಗೆ ಒಪ್ಪಿಗೆಯ ಬದ್ದತೆ ತೋರಿಸಿರುವುದರಿಂದ ಯಾವುದೇ ವಿರೋಧವಿಲ್ಲದಂತಾಗಿದೆ. ಹಸಿದವರನ್ನು ಹೆಚ್ಚು ಕಾಯಿಸದೇ ಒಳಮೀಸಲಾತಿ ಜಾರಿ ಮಾಡಿ ಸಣ್ಣಪುಟ್ಟ ವ್ಯತ್ಯಾಸವಿದ್ದರೆ 2025ರ ನಂತರ ನಡೆಯುವ ಜಾತಿಗಣತಿಯ ದತ್ತಾಂಶಗಳನ್ನು ಪರಿಗಣಿಸಿ ಸೂಕ್ತ ಬದಲಾವಣೆ ಮಾಡಬಹುದಾಗಿದೆ ಎಂದರು.
ಕರ್ನಾಟಕ ಜನಶಕ್ತಿ ಮುಖಂಡ ಪುರುಷೋತಮ್, ನಿಸರ್ಗ ಟ್ರಸ್ಟ್ ಅಧ್ಯಕ್ಷ ದುರ್ಗೇಶ್, ಅನುಷ್, ಬೆಸ್ಕಾಂ ತಿಪೇಸ್ವಾಮಿ, ಶಿಕ್ಷಕಿ ದ್ರಾಕ್ಷಿಯಣಿ, ಗಿರಿಜಾ, ಶಾಂತಮ್ಮ, ಮಾನಸ, ಉಪನ್ಯಾಸಕ ಇಂದೂದರ್ ಗೌತಮ್, ಬನ್ನಿಕೋಡ್ ರಮೇಶ್, ರಾಮಣ್ಣ, ಶಕುಂತಲಾ ಮುಂತಾದವರು ಭಾಗವಹಿಸಿದ್ದರು.