ಕನ್ನಡಪ್ರಭ ವಾರ್ತೆ ಕಾರ್ಕಳ
ಕನ್ನಡ ಬಳಸದೇ ಇದ್ದಲ್ಲಿ ಕನ್ನಡ ಬೆಳೆಯುವುದಿಲ್ಲ. ಕನ್ನಡವನ್ನು ಕನ್ನಡಿಗರೇ ಬಳಸದೇ ಇದ್ದಲ್ಲಿ ಕನ್ನಡ ಹೇಗೆ ಕರ್ನಾಟಕದ ಸಾರ್ವಭೌಮ ಭಾಷೆಯಾಗಿ ಬೆಳೆಯುತ್ತದೆ ಎಂದು ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪಿ.ಜಯಲಕ್ಷ್ಮೀ ಜಯಕುಮಾರ್ ಪ್ರಶ್ನಿಸಿದರು.ಅವರು ಹೆಬ್ರಿ ತಾಲೂಕಿನ ಶಿವಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೆಬ್ರಿಯ ತಾಲೂಕಿನ ಐದನೇ ಸಾಹಿತ್ಯ ಸಮ್ಮೇಳನ ‘ರೂವಾರಿ ಗಂಧಶಾಲಿಯ ಹೊಂಬೆಳಕು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನ್ಯಾಯಾಲಯಗಳಲ್ಲಿ ಕನ್ನಡ ಸಮರ್ಪಕ ಬಳಕೆಯಾಗುತ್ತಿಲ್ಲ, ರಾಜ್ಯದಲ್ಲಿ ಹೊರರಾಜ್ಯ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಲ್ಲಿ ಗುಂಪು ಸ್ಥಾಪಿಸಿ ಕನ್ನಡ ಕನ್ನಡಿಗರನ್ನೇ ಹತ್ತಿಕ್ಕುವ ಕೆಲಸಗಳು ನಡೆಯುತ್ತಿವೆ. ಮುಂದೆ ಕನ್ನಡಿಗರು ಪರಭಾಷಿಕರಿಂದ ಹೊಡೆತ ತಿನ್ನುವ ದಿನಗಳು ದೂರವಿಲ್ಲ ಎಂದು ಅತಂಕ ವ್ಯಕ್ತಪಡಿಸಿದರು.
ಆಳುವ ಸರ್ಕಾರಗಳು ವೋಟ್ ಬ್ಯಾಂಕ್‌ನದ್ದೇ ಚಿಂತೆಯಾಗಿದೆ. ನಾಮಫಲಕಗಳೆಲ್ಲ ಕನ್ನಡ ಕಡ್ಡಾಯವೆಂಬ ಆದೇಶ ಇದ್ದರೂ ಕನ್ನಡ ಮಾತ್ರ ಸಂಪೂರ್ಣ ಕಾಣುವುದಿಲ್ಲ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿಲ್ಲ, ಮಹಿಷಿ ವರದಿ, ಮಹಾಜನ್ ಆಯೋಗ ವರದಿಗಳು ಸರ್ಕಾರದ ಕಡತದಲ್ಲೇ ಧೂಳು ತಿನ್ನುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸಾಹಿತಿ ಹಾಗೂ ಹರಿದಾಸ ಬಿ.ಸಿ. ರಾವ್ ಶಿವಪುರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಅಷ್ಟಾವಧಾನಿ ಡಾ. ಕಬ್ಬಿನಾಲೆ ಬಾಲಕೃಷ್ಣ ಬಾರಧ್ವಾಜ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾಲಕೃಷ್ಣ ಬಾರಧ್ವಾಜ್ ಅವರು ಸಮ್ಮೆಳನದ ಅಧ್ಯಕ್ಷೆ ಜಯಲಕ್ಷ್ಮೀ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಮ್ಮೇಳನ ಉದ್ಘಾಟಿಸಿದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಹಾಸನ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖಾ ಜಂಟಿ ಆಯುಕ್ತ ಗೋಕುಲ ದಾಸ್ ನಾಯಕ್, ಹೆಬ್ರಿ ತಹಸೀಲ್ದಾರ್ ಎಸ್.ಎ. ಪ್ರಸಾದ್, ಉದ್ಯಮಿಗಳಾದ ಯೋಗೀಶ್ ಭಟ್, ಪ್ರಸನ್ನ ಸಿ. ಶೆಟ್ಟಿ, ಲಕ್ಷ್ಮೀನಾರಾಯಣ ನಾಯಕ್, ಶಶಿಕಿರಣ್ ಭಟ್, ಪ್ರಸನ್ನ ಸೂಡ, ಗಣೇಶ್ ಕಿಣಿ, ಮೋಹನ್ ದಾಸ್ ನಾಯಕ್, ಸುರೇಶ್ ಶೆಟ್ಟಿ ಹುಣ್ಸೆಡಿ, ಹರೀಶ್ ಶೆಟ್ಟಿ ಪಡುಪರ್ಕಳ, ರಾಜರಾಂ ಹೆಗ್ಡೆ ಹಿರಿಯಡ್ಕ, ವಿಪ್ರೋ ಲಿಮಿಟೆಡ್‌ನ ಹರಿದಾಸ ಎಸ್ಪಿ, ಎಸ್.ಆರ್. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಾಗರಾಜ್ ಶೆಟ್ಟಿ, ಧರ್ಮಸ್ಥಳ ಯೋಜನೆ ಯೋಜನಾಧಿಕಾರಿ ಲೀಲಾವತಿ, ತಾಲೂಕು ಕಸಾಪ ಅಧ್ಯಕ್ಷ ಪ್ರವೀಣ್ ಮುದ್ದೂರು ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಶಂಕರನಾರಾಯಣ ಕೊಡಂಚ, ಗ್ರಾ.ಪಂ. ಅಧ್ಯಕ್ಷೆ ಶೋಭ ಶೆಟ್ಟಿ, ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ.ಎಂ. ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು.ಸಮ್ಮೆಳನದ ಸ್ವಾಗತ ಸಮಿತಿ ಗಣೇಶ್ ಹಾಂಡ ಸ್ವಾಗತಿಸಿದರು. ಪ್ರಕಾಶಶೆಟ್ಟಿ ಮಾತಿಬೆಟ್ಟು, ಗೀತಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ರಮಾನಂದ ಶೆಟ್ಟಿ ವಂದಿಸಿದರು.
ಸಾಧಕರಿಗೆ ಸನ್ಮಾನ:ಶೋಭಾ ಆರ್. ಕಲ್ಕೂರ್ (ಸಾಹಿತ್ಯ), ಗಣೇಶ್ ಭಾಗವತರು ಹೆಬ್ರಿ (ಯಕ್ಷಗಾನ), ಶಂಭು (ಕಾರ್ಮಿಕರು), ನಾರಾಯಣ ಭಟ್ ತಿಂಗಳೆ (ಧಾರ್ಮಿಕ), ಶೀನಾ ಶೆಟ್ಟಿಗಾರ್ ಕೆಲಕಿಲ (ನಾಟಿವೈದ್ಯ), ರಾಘವೇಂದ್ರ ರಾವ್ ಪಾಂಡುಕಲ್ಲು (ಕೃಷಿ), ಕೃಷ್ಣಾ ಹಾಂಡ (ಗುಡಿ ಕೈಗಾರಿಕೆ), ಕೃಷ್ಣ ನಾಯ್ಕ್ ಬೆಳ್ವೆ (ಕೃಷಿ), ಶಂಕರ್ ಶೆಟ್ಟಿ ಹೊನ್ಕಲ್ (ನಿವೃತ್ತ ಯೋಧ), ಗಿರಿಜಾ ಹೆಗ್ಡೆ (ಹೈನುಗಾರಿಕೆ), ಪತ್ರಕರ್ತರಾದ ಮಂಜುನಾಥ್ ಹೆಬ್ಬಾರ್ ಶಿವಪುರ, ನರೇಂದ್ರ ಮೆರಸಣಿಗೆ, ಸುಪ್ರೀತಾ ಹೆಬ್ಬಾರ್, ನಾಟಕ ನಿರ್ದೇಶಕ ಸತೀಶ್ ಆಚಾರ್ಯ, ಹರಿದಾಸರಾದ ಪದ್ಮನಾಭ ಗುರುದಾಸ್, ಸಾಧಕಿ ಸುಗಂಧಿ ಎಸ್., ಆಸ್ರೀತ್, ತಾರನಾಥ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ಪುಸ್ತಕ ಬಿಡುಗಡೆ:ಮಂಜುನಾಥ್ ಕೆ. ಶಿವಪುರ ಬರೆದ ಪ್ರಬುದ್ಧರಾಗೋಣ ಬನ್ನಿ (ವೈಚಾರಿಕ ಲೇಖನ) ಪುಸ್ತಕ ಹಾಗೂ ಮುನಿಯಾಲು ವಿಜಯಲಕ್ಷ್ಮೀ ಆರ್. ಕಾಮತ್ ಬರೆದ ಜೀವನ ಸಂಗೀತ ಕವನ ಸಂಕಲನ, ವಸಂತ ಹೊಳ್ಳ ಬರೆದ ಗೊಂಚಲು ಬಿಡುಗಡೆಗೊಳಿಸಲಾಯಿತು.
ಗೋಷ್ಠಿಗಳು:ವಿವಿಧ ಇಲಾಖೆಗಳಲ್ಲಿ ಕನ್ನಡ ವಿಷಯದ ಬಗ್ಗೆ ನಿವೃತ್ತ ಶಿಕ್ಷಣಾಧಿಕಾರಿ ರವಿಶಂಕರ್ ಆರ್. ರಾವ್, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಬಗ್ಗೆ ನಿವೃತ್ತ ಪಿಡಿಒ ರಾಧೃಷ್ಣ ರಾವ್, ಕೃಷಿ ಇಲಾಖೆ ಬಗ್ಗೆ ನಿವೃತ್ತ ಕೃಷಿ ಸಹಾಯಕ ಅಧಿಕಾರಿ ಹುತ್ತುರ್ಕೆ ರಾಧಾಕೃಷ್ಣ ಶೆಟ್ಟಿ, ಅಂಚೆ ಇಲಾಖೆ ಬಗ್ಗೆ ಕೃಷ್ಣ ಎಸ್., ಬ್ಯಾಂಕಿಂಗ್ ಬಗ್ಗೆ ಮುನಿಯಾಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧಾಕರ ಕೆ.ಜಿ. ವಿಷಯ ಮಂಡಿಸಿದರು. ಎಂಜಿಎಂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಸಂತ ಪುತ್ತಿ ಸಮನ್ವಯತೆ ಹಾಗೂ ನಿವೃತ್ತಿ ಬ್ಯಾಂಕ್ ಪ್ರಬಂಧಕಿ ಸುಜಯ, ಪ್ರಾಧ್ಯಾಪಕಿ ಆದಿತ್ಯ ಕುಮಾರಿ ಎಚ್. ಉಪಸ್ಥಿತರಿದ್ದರು.ಕವಿಗೋಷ್ಠಿ:ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ. ಎಂ.ಚೈತ್ರ, ಮಹೇಶ್ ಬೈಕಾಡಿ, ಚೈತ್ರ ಕಬ್ಬಿನಾಲೆ, ಪೂರ್ಣೇಶ್ ಹೇಬ್ರಿ, ಮಾಲತಿ ಜಿ. ಪೈ, ಅರುಣಾ ಹೆಬ್ರಿ, ಆನಂದ್ ಕೊಠಾರಿ, ಶೋಭ ಆರ್., ಚೈತನ್ಯ ಶಿವಪುರ, ಅಭಿಷೇಕ್ ಸೋಮೇಶ್ವರ, ವೀಣಾ ಕುಮಾರಿ ಎಚ್.ಎನ್., ಸತೀಶ್ ಬೇಳಂಜೆ ಕವನ ವಾಚಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಕುಮಾರ್, ಉಪನ್ಯಾಸಕಿ ಶ್ರೀ ಮುದ್ರಾಡಿ, ಸುಲತಾ ಹೆಗ್ಡೆ ಉಪಸ್ಥಿತರಿದ್ದರು.ಮೆರವಣಿಗೆ:
ಶಿವಪುರ ಪಂಚಾಯಿತಿ ಬಳಿಯಿಂದ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ನಾಡು, ನುಡಿಯ ಭಾವಚಿತ್ರ ಹಿಡಿದ ವಿದ್ಯಾರ್ಥಿಗಳು, ಯಕ್ಷಗಾನ ವೇಷ, ಮರಕಾಲು, ಮರಾಠಿ ಗೆಳೆಯರು, ಬೇಡರ ಕುಣಿತ, ಪುಣ್ಯಕೋಟಿ, ಹುಲಿವೇಷ, ಪರಿಶ್ರಮ ಸೇವಾತಂಡ, ಬ್ಯಾಂಡ್ ಸೆಟ್, ಸರ್ಕಾರಿ ಪದವಿ ಕಾಲೇಜಿನ ರೋವರ್ ರೇಂಜರ್ಸ್ ತಂಡ, ಭಾರತ ಸೇವಾದಳ ತಂಡ, ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ತುಳುನಾಡಿನ ಸಂಸ್ಕೃತಿಯ ಕಂಬಳ ಕೋಣಗಳು ಕೂಡ ಮೆರವಣಿಗೆಗೆ ಮೆರುಗು ನೀಡಿತು.ಸಾಹಿತಿಗಳು, ಕನ್ನಡ ಶಾಲು ಧರಿಸಿ ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳು, ಸಾಹಿತ್ಯಸಕ್ತರರು ಉಪಸ್ಥಿತರಿದ್ದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು.
ಧ್ವಜಾರೋಹಣ:ಶಿವಪುರ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಹೆಬ್ರಿ ಕಸಾಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಆಕರ್ಷಕ ಪ್ರವೇಶ ದ್ವಾರ:ಸಮ್ಮೇಳನಕ್ಕೆ ಆಗಮಿಸುವ ಸಭಾಂಗಣದ ಎದುರಿನ ವನಜಾ ಭುಜಂಗ ಶೆಟ್ಟಿ ಪ್ರವೇಶ ದ್ವಾರವನ್ನು ಅಡಕೆ ಮೂಲಕ ಅಲಂಕರಿಸಲಾಗಿತ್ತು. ಜೊತೆಗೆ ತೆಂಗಿನ ಗರಿಗಳು, ಬೈನೆ ಮರದ ಪಿಂಗಾರವನ್ನು ಪೋಣಿಸಿಕೊಂಡು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಲ್ಲಾಡಿ ಸುಧಾಕರ ಶೆಟ್ಟಿ ಮುದ್ರಾಡಿ ಈ ಪ್ರವೇಶ ದ್ವಾರವನ್ನು ನಿರ್ಮಿಸಿದ್ದಾರೆ.