ಸೇವೆ ಕಾಯಂ ಮಾಡುವಂತೆ ಒತ್ತಾಯ

KannadaprabhaNewsNetwork |  
Published : May 28, 2025, 12:24 AM IST
27ಎಚ್‌ಪಿಟಿ5- ಹೊಸಪೇಟೆಯಲ್ಲಿ ಮಂಗಳವಾರ ಪೌರ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ಪೌರ ನೌಕರರು ಸ್ಥಳೀಯ ನಗರಸಭೆ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಪೌರ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಕನ್ನಡಪ್ರಭ ವಾರ್ತೆ ಹೊಸಪೇಟೆ

ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಪೌರ ನೌಕರರ ಸಂಘದ ನೇತೃತ್ವದಲ್ಲಿ ಪೌರ ನೌಕರರು ಸ್ಥಳೀಯ ನಗರಸಭೆ ಕಚೇರಿ ಎದುರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ನಗರಸಭೆ ಸಮುದಾಯ ಸಂಘಟನಾಧಿಕಾರಿ ರವಿಕುಮಾರ್ ಮಾತನಾಡಿ, ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಕೆಜಿಐಡಿ, ಜಿಪಿಎಸ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಪೌರ ಕಾರ್ಮಿಕರು, ಸೂಪರ್‌ ವೈಸರ್, ಕಂಪ್ಯೂಟರ್‌ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್ ಸೇರಿದಂತೆ ಗುತ್ತಿಗೆ, ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ನೇರ ಪಾವತಿ ವೇತನ ಮಾಡಬೇಕು. ಜೊತೆಗೆ ಸೇವೆ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.

2022-23ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಗೊಂಡಿರುವ ನೌಕರರಿಗೆ ಸ್ಥಳೀಯ ಸಂಸ್ಥೆಗಳ ನಿಧಿಯಲ್ಲಿ ವೇತನ ಪಡೆಯಲು ಆದೇಶಿಸಿರುವುದನ್ನು ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಲ್ಲಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಓಬಣ್ಣ ಮಾತನಾಡಿ, ರಾಜ್ಯ ಪೌರನೌಕರರ ಸಂಘದ ತೀರ್ಮಾನದಂತೆ, ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ 45 ದಿನಗಳ ಗಡುವು ನೀಡಲಾಗಿತ್ತು. ಬೇಡಿಕೆಗಳ ಈಡೇರಿಕೆಗಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ 45 ದಿನಗಳ ಕಾಲ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದೆವು. ಆದರೆ ನಮ್ಮ ಯಾವುದೇ ಬೇಡಿಕೆಗಳು ಈಡೇರದ ಹಿನ್ನೆಲೆ ಮತ್ತು ಸರ್ಕಾರಕ್ಕೆ ನೀಡಿದ್ದ ಗಡುವು ಮೇ 26ಕ್ಕೆ ಕೊನೆಗೊಂಡಿದ್ದರಿಂದ ನಗರಸಭೆ ಎಲ್ಲ ಕೆಲಸ ಕಾರ್ಯ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರೆಯಲಿದೆ ಎಂದರು.

ಮುಖಂಡರಾದ ಬಿ.ಎಂ. ನಾಗೇಂದ್ರ ವರ್ಮಾ, ಕೆ.ಶೇಷಣ್ಣ, ಎಸ್.ಸುರೇಶ್, ಎಂ.ರಾಘವೇಂದ್ರ, ಎನ್.ಯಲ್ಲಪ್ಪ, ಕೆ.ರಮೇಶ್, ಭಾರತಿ, ಈರಣ್ಣ, ತೇಜಸ್ವಿನಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರಕಾರ್ಮಿಕರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್