ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತರ ದಿಢೀರ್ ಭೇಟಿ, ಪರಿಶೀಲನೆ

KannadaprabhaNewsNetwork |  
Published : May 28, 2025, 12:24 AM ISTUpdated : May 28, 2025, 12:25 AM IST
26 ಟಿವಿಕೆ 4 – ತುರುವೇಕೆರೆ ಪಟ್ಟಣ ಪಂಚಾಯಿತಿಗೆ ಲೋಕಾಯಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಜಿಲ್ಲಾ ಲೋಕಾಯುಕ್ತರು ನಡೆಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಬಂದಿದ್ದ ದೂರುಗಳ ಬಗ್ಗೆ ಪಟ್ಟಣ ಪಂಚಾಯಿತಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾ ಲೋಕಾಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ಪಟ್ಟಣ ಪಂಚಾಯಿತಿಗೆ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಜಿಲ್ಲಾ ಲೋಕಾಯುಕ್ತರು ನಡೆಸಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಬಂದಿದ್ದ ದೂರುಗಳ ಬಗ್ಗೆ ಪಟ್ಟಣ ಪಂಚಾಯಿತಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಜಿಲ್ಲಾ ಲೋಕಾಯುಕ್ತ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ಪಟ್ಟಣ ಪಂಚಾಯಿತಿಗೆ ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಯೇ ತಮಗೆ ನೀಡಲಾಗಿದ್ದ ನಿವೇಶನದ ಬದಲಿಗೆ ಹೊಂದಿಕೊಂಡಂತಿರುವ ಪಂಚಾಯಿತಿಯ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ರಂಗಸ್ವಾಮಿ ಎಂಬುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತದಿಂದ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದಾಗ್ಯೂ ಸಹ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪುನಃ ರಂಗಸ್ವಾಮಿ ಉಪ ಲೋಕಾಯುಕ್ತರಿಗೇ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ತಮ್ಮ ಸಿಬ್ಬಂದಿ ಸಹಿತ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮಾಹಿತಿ ಕೇಳಿದರು. ಅಂತಿಮವಾಗಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ಸಿಬ್ಬಂದಿಯೇ ಅಕ್ರಮವಾಗಿ ನಿವೇಶನ ಬಳಸಿ ಮನೆಯನ್ನು ಕಟ್ಟಿಕೊಂಡಿರುವುದು ಖಾತ್ರಿಯಾಯಿತು. ಆದರೆ ಸದರಿ ವ್ಯಕ್ತಿ ತನಗೆ ಮಂಜೂರು ಮಾಡಲಾಗಿರುವ ನಿವೇಶನವನ್ನು ಪುನಃ ಪಟ್ಟಣ ಪಂಚಾಯಿತಿಗೆ ಹಿಂತಿರುಗಿಸಿರುವುದಾಗಿ ತಿಳಿಸಿದ್ದಾರೆ. ಆದರೂ ಸಹ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಉಪ ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಇನ್ಸ್ ಪೆಕ್ಟರ್ ಶಿವರುದ್ರಪ್ಪ ಮೇಟಿ ತಿಳಿಸಿದರು. ಪಟ್ಟಣ ಪಂಚಾಯಿತಿಗೆ ಲೋಕಾಯುಕ್ತರು ಆಗಮಿಸಿದ್ದಾರೆಂಬ ಸಂಗತಿ ತಿಳಿಯುತ್ತಿದ್ದಂತೆ ಪಟ್ಟಣದ ಅಫ್ಜಲ್ ಎಂಬುವವರು ತಮ್ಮ ತಂದೆಯ ಹೆಸರಿಗೆ ಆಗಿದ್ದ ನಿವೇಶನವನ್ನು ಇಲ್ಲಿಯ ಸಿಬ್ಬಂದಿ ಬೇರೊಬ್ಬರ ಹೆಸರಿಗೆ ಮಾಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡಿ ಎಂದು ದಾಖಲೆಗಳ ಸಹಿತ ಮನವಿ ಮಾಡಿದರು. ಬೆಳ್ಳಿ ಪೆಟ್ರೋಲ್ ಬಂಕ್ ಬಳಿ ನೂರಾರು ನಿವೇಶನಗಳು ಇವೆ. ಎಲ್ಲವೂ ಅಪ್ರೂವ್ ಆಗಿದೆ. ಮನೆಗಳನ್ನೂ ನಿರ್ಮಿಸಲಾಗಿದೆ. ಆದರೆ ಅಲ್ಲಿಯ ನಿವಾಸಿಗಳಿಗೆ ಓಡಾಡಲೇ ದಾರಿ ಇಲ್ಲದಾಗಿದೆ. ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ನರಸಿಂಹ ದೇವರು ಎಂಬುವವರು ಮನವಿ ಮಾಡಿಕೊಂಡರು. ಪಟ್ಟಣ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎನ್.ಶಿವರಾಜ್ ಎಂಬುವವರು ಪಟ್ಟಣದ ಸಹಕಾರಿ ಬ್ಯಾಂಕ್ ನಲ್ಲಿನ ಸಿಬ್ಬಂದಿಯೋರ್ವರು ಸುಮಾರು 25 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ್ದರು. ಆದರೆ ಈಗಿನ ಆಡಳಿತ ಮಂಡಲಿ ಸಿಬ್ಬಂದಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಸಲು ಕಟ್ಟಿಸಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಬ್ಯಾಂಕಿಗೆ ನಷ್ಠ ಉಂಟಾಗಲಿದೆ ಎಂದು ದೂರಿದರು. ಕೂಡಲೇ ಮಧ್ಯ ಪ್ರವೇಶಿಸಿ ಬ್ಯಾಂಕಿಗೆ ಬರಬೇಕಿರುವ ಎಲ್ಲಾ ಹಣವನ್ನೂ ವಸೂಲು ಮಾಡಿಸಬೇಕೆಂದು ಮನವಿ ಮಾಡಿದರು. ತಿಪಟೂರು ರಸ್ತೆಯ ಹರೀಶ್ ಸೇರಿದಂತೆ ಹಲವಾರು ಮಂದಿ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ತಮಗಾಗಿರುವ ಸಮಸ್ಯೆಯನ್ನು ಲೋಕಾಯುಕ್ತರಲ್ಲಿ ಹೇಳಿಕೊಂಡರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ