- ಮೇದಗಿನಕೆರೆ ಗ್ರಾಮದ ಕಾರ್ಯಕ್ರಮದಲ್ಲಿ ಕೆವಿಕೆ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ್
- ಹೊಸ ತಳಿಯಾದ ಆರ್‌ಎನ್ಆರ್-15048 ಬಿತ್ತನೆ ಸೂಕ್ತ
- ಪೆಂಡಮಿತಿಲಿನ್ ಕಳೆನಾಶಕ ಪ್ರತಿ ಎಕರೆಗೆ 700 ಮಿ.ಲೀ. ಬಳಸಬೇಕು- - -
ಬರಪೀಡಿತ ಜಗಳೂರು ತಾಲೂಕಿಲ್ಲೀಗ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿನ ರೈತರು ರಾಗಿ ಬೆಳೆ ಮಾದರಿಯಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡಿದರೆ ರೈತರಿಗೆ ವರದಾನವಾಗಲಿದೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಹೇಳಿದರು.
ಪ್ರಮುಖವಾದ ಆಹಾರ ಬೆಳೆ ಈ ಬೆಳೆಯನ್ನು ಮಳೆಯಾಶ್ರಿತ ಪ್ರದೇಶಗಳಾದ ಜಗಳೂರು ತಾಲೂಕಿನಲ್ಲಿ ಬೆಳೆಯಬಹುದು ಎಂದು ತೋರಿಸಿಕೊಡಲಾಗಿದೆ. 1 ಎಕರೆ ಪ್ರದೇಶಕ್ಕೆ 10 ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ. ನವೀನ ತಳಿಯಾದ ಆರ್‌ಎನ್ಆರ್-15048 ಬಿತ್ತನೆ ಮಾಡುವುದು ಸೂಕ್ತ. ಸಂಯುಕ್ತ ಕೂರಿಗೆಯ ಮುಖಾಂತರ ಗೊಬ್ಬರ ಮತ್ತು ಬೀಜವನ್ನು ಬಿತ್ತನೆ ಮಾಡಬೇಕು. ಬಿತ್ತನೆ ಮಾಡಿದ ಎರಡು ದಿನಗಳ ಒಳಗೆ ಉದಯೋನ್ಮುಖ ಕಳೆನಾಶಕವಾದ ಪೆಂಡಮಿತಿಲಿನ್ 700 ಮಿ.ಲೀ. ಪ್ರತಿ ಎಕರೆಗೆ ಬಳಸಬೇಕು ಎಂದು ಸಲಹೆ ನೀಡಿದರು.
ಬಿತ್ತನೆಯಾದ 20 ದಿವಸಗಳ ನಂತರ ಮತ್ತೊಮ್ಮೆ ಕಳೆನಾಶಕವಾದ ಬಿಸ್ ಪೈರಿ ಬ್ಯಾಕ್ ಸೋಡಿಯಂ 100 ಎಂಎಲ್ ಪ್ರತಿ ಎಕರೆಗೆ ಜೊತೆಗೆ ಮೆಟ್ಸಲ್ಫ್ರನ್ 20 ಡ್ಯೂಪಿ ಗ್ರಾಂ ಎಕರೆಗೆ ಬಳಸಬೇಕು. ಸಮಗ್ರ ಕಳೆ ನಿರ್ವಹಣೆ ಪದ್ಧತಿಗಳಾದ ಸೈಕಲ್ ಲೀಡರ್ ಮತ್ತು ಎತ್ತಿನ ಬೇಸಾಯ ಮಾಡುವುದರಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಕಾಂಡಕೊರಕದಲ್ಲಿ ನಿರ್ವಹಣೆಗಾಗಿ ನಾಟಿ ಮತ್ತು ಬಿತ್ತನೆಯಾದ 20 ದಿವಸಗಳ ನಂತರ ಪ್ರತಿ ಎಕರೆಗೆ 4ರಂತೆ ಮೋಹಕ ಬಲೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ಮಾತನಾಡಿ, ಇತ್ತೀಚಿಗೆ ಅಡಕೆ ಬೆಳೆಗೆ ಕೆಂಪು ಮತ್ತು ಬಿಳಿ ನುಸಿ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ಅತಿಯಾದ ಅಡಕೆ ಬೆಳೆ ವ್ಯಾಪ್ತಿ ವಿಸ್ತಾರಗೊಳ್ಳುತ್ತಿರುವುದಾಗಿದೆ. ರೈತರು ಇಳುವರಿ ಹೆಚ್ಚಿಸಲು ಅಡಕೆ ತೋಟಗಳಲ್ಲಿ ದ್ವಿದಳ ಧಾನ್ಯ ಬೆಳೆಯಬೇಕು. ಈರುಳ್ಳಿ ಬೆಳೆಯುವ ರೈತರು ಬಾಗಲಕೋಟೆ ತೋಟಗಾರಿಕಾ ವಿ.ವಿ. ಸಂಶೋಧಿಸಿರುವ ಭೀಮಾ ಸೂಪರ್ ತಳಿ ಬಿತ್ತನೆ ಮಾಡಿದರೆ ರೋಗಬಾಧೆ ನಿಯಂತ್ರಿಸುತ್ತದೆ ಎಂದರು.
- - -
ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಕೂರಿಗೆ ಭತ್ತ ಬಿತ್ತನೆ ಬಗ್ಗೆ ಕೃಷಿ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್, ತೋಟಗಾರಿಕಾ ತಜ್ಞ ಡಾ. ಎಂ.ಜಿ. ಬಸವನಗೌಡ ರೈತರಿಗೆ ತರಬೇತಿ, ಸಲಹೆ ನೀಡಿ ಬಿತ್ತನೆ ಬೀಜಗಳನ್ನು ವಿತರಿಸಿದರು.