ಶಾಲಾ ಆರಂಭದಲ್ಲೇ ಮಕ್ಕಳ ಕೈಗೆ ಪಠ್ಯಪುಸ್ತಕ

KannadaprabhaNewsNetwork |  
Published : May 28, 2025, 12:24 AM IST
ಶಾಲಾ ಆರಂಭದಲ್ಲೇ ಮಕ್ಕಳ ಕೈಗೆ ಪಠ್ಯಪುಸ್ತಕ | Kannada Prabha

ಸಾರಾಂಶ

ಶಾಲೆಗೆ ಮಕ್ಕಳು ಬರುವ ಮೊದಲೇ ಪಠ್ಯಪುಸ್ತಕ ಸಂಗ್ರಹ ಮಾಡಿಕೊಳ್ಳುವ ಕೆಲಸ ಭರದಿಂದ ಸಾಗಿದೆ

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತರಗತಿ ಮೇ 29ರಿಂದ ಆರಂಭವಾಗಲಿದ್ದು, ಶಾಲೆಗೆ ಮಕ್ಕಳು ಬರುವ ಮೊದಲೇ ಪಠ್ಯಪುಸ್ತಕ ಸಂಗ್ರಹ ಮಾಡಿಕೊಳ್ಳುವ ಕೆಲಸ ಭರದಿಂದ ಸಾಗಿದೆ. ಶಾಲಾ ತರಗತಿ ಆರಂಭದ ಮೊದಲ ದಿನವೇ ಮಕ್ಕಳ ಕೈಗೆ ಪಠ್ಯಪುಸ್ತಕ ಲಭ್ಯವಾಗಲಿವೆ.

ಬೇಸಿಗೆ ರಜೆ ಮುಗಿದ ಕೂಡಲೇ ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ. ವಿಶೇಷ ಕಾರ್ಯಕ್ರಮ ಹಾಗೂ ಪಠ್ಯಪುಸ್ತಕ ವಿತರಣೆ ಮಾಡುವ ಮೂಲಕ ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಆಯಾ ಶಾಲಾ ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಪ್ರಸಕ್ತ ವರ್ಷ ಜಿಲ್ಲೆಯ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪಠ್ಯಪುಸ್ತಕಗಳನ್ನು ನೇರವಾಗಿ ಪೂರೈಕೆ ಮಾಡಿರುತ್ತದೆ. ತಮಗೆ ಬಂದ ಪಠ್ಯಪುಸ್ತಕಗಳನ್ನು ಬಿಇಒ ಕಚೇರಿ ಸಿಬ್ಬಂದಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರವಾನೆ ಮಾಡುತ್ತಿದ್ದಾರೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೇಡಿಕೆಗೆ ತಕ್ಕಂತೆ 2025ರ ಮೇ ತಿಂಗಳಲ್ಲಿ ಶೇ.78.37ರಷ್ಟು ಪಠ್ಯಪುಸ್ತಕಗಳು ಉಚಿತವಾಗಿ ಪೂರೈಕೆಯಾಗಿವೆ. ಮಾರಾಟಕ್ಕೆ ಶೇ.68.26ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಶೇ.68.26 ರಷ್ಟು ಪಠ್ಯಪುಸ್ತಕಗಳನ್ನು ಉಚಿತವಾಗಿ ಹಾಗೂ ಮಾರಾಟ ಮಾಡಿದ ಶೇ.75.86 ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳಿಗೆ ಪೂರೈಕೆ ಮಾಡಲು ಉಚಿತವಾಗಿ 3589358 ಪಠ್ಯಪುಸ್ತಕ ಹಾಗೂ ಮಾರಾಟಕ್ಕೆ 1050845 ಪಠ್ಯಪುಸ್ತಕ ಪೂರೈಸುವಂತೆ ಬೇಡಕೆ ಸಲ್ಲಿಸಲಾಗಿತ್ತು. ಈ ಪೈಕಿ ಉಚಿತವಾಗಿ 2812828 ಪಠ್ಯಪುಸ್ತಕ ಹಾಗೂ ಮಾರಾಟಕ್ಕೆ 851552 ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ಎಲ್ಲ ಬಿಇಒ ಕಚೇರಿಗಳಿಗೆ ಒಟ್ಟು ಉಚಿತವಾಗಿ 2449958 ಹಾಗೂ ಮಾರಾಟಕ್ಕೆ 797145 ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ.

ಬೈಲಹೊಂಗಲ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಖಾನಾಪುರ, ಕಿತ್ತೂರ, ರಾಮದುರ್ಗ ಮತ್ತು ಸವದತ್ತಿ ಕ್ಷೇತ್ರ ವಲಯ ಶಿಕ್ಷಣಾಧಿಕಾರಿ ವಲಯದ ವ್ಯಾಪ್ತಿಯ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗುತ್ತಿದೆ.

ಅದರಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬೇಡಿಕೆಗೆ ತಕ್ಕಂತೆ ಶೇ.79.58ರಷ್ಟು ಪಠ್ಯಪುಸ್ತಕಗಳು ಉಚಿತವಾಗಿ ಪೂರೈಕೆಯಾಗಿವೆ. ಮಾರಾಟಕ್ಕೆ ಶೇ.81.42ರಷ್ಟು ಪಠ್ಯಪುಸ್ತಕ ಪೂರೈಕೆಯಾಗಿವೆ. ಈ ಪೈಕಿ ಶೇ.68.28ರಷ್ಟು ಉಚಿತವಾಗಿ ಹಾಗೂ ಮಾರಾಟಕ್ಕೆ ಶೇ.70.99ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡಲಾಗಿದೆ. ಚಿಕ್ಕೋಡಿ ಜಿಲ್ಲೆಯಲ್ಲಿ ಉಚಿತವಾಗಿ 4732120 ಹಾಗೂ ಮಾರಾಟಕ್ಕೆ 1317649 ಪಠ್ಯಪುಸ್ತಕ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಉಚಿತವಾಗಿ 3770704 ಹಾಗೂ ಮಾರಾಟಕ್ಕೆ 1072778 ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಕಾಗವಾಡ, ಮೂಡಲಗಿ, ನಿಪ್ಪಾಣಿ ಮತ್ತು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ.

ಪಠ್ಯಪುಸ್ತಕ ಕೊರತೆಯಾಗದಂತೆ ನಿಗಾ:

ಬೇಸಿಗೆ ರಜೆ ಮುಗಿದ ಬಳಿಕ ಮೇ 29ರಿಂದ ಶಾಲಾ ತರಗತಿಗಳು ಆರಂಭವಾಗಲಿವೆ. ಮೊದಲ ದಿನ ಸ್ವಚ್ಛತಾ ಕಾರ್ಯ ನಡೆಯಲಿದೆ. ಮೇ 30ರಂದು ವಿಶೇಷ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಸ್ವಾಗತಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಜಿಲ್ಲೆಯ ಪ್ರತಿ ತಾಲೂಕಿನ ಆಯ್ದ ಶಾಲೆಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ವಿಶೇಷ ಬಿಸಿಯೂಟದ ವ್ಯವಸ್ಥೆ ಮಾಡಲಾಗುವುದು. ಪಠ್ಯಪುಸ್ತಕ ಕೊರತೆಯಾಗದಂತೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳಿಗೆ ನಿಗದಿತ ಸಮಯದಲ್ಲೇ ಪಠ್ಯಪುಸ್ತಕ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಲಾಗಿದೆ. ಅಲ್ಲಿಂದ ಶಾಲಾ ಶಿಕ್ಷಕರು ಪಡೆದುಕೊಂಡು ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.ಶಿಕ್ಷಣ ಇಲಾಖೆಯಿಂದ ಅಗತ್ಯ ತಯಾರಿ

ಕೆಲ ವರ್ಷಗಳ ಹಿಂದೆ ಶಾಲೆ ಆರಂಭವಾದರೂ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿರಲಿಲ್ಲ. ಆದರೆ, ಈ ವರ್ಷ ಶಾಲೆ ಆರಂಭಕ್ಕೂ ಮೊದಲು ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಲಿವೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆರಂಭದಲ್ಲೇ ಜಿಲ್ಲಾ ಮಟ್ಟದ ಕಚೇರಿಗಳಿಗೆ ಪಠ್ಯಪುಸ್ತಕ ಕಳುಹಿಸಲಾಗುತ್ತಿತ್ತು. ಬಳಿಕ ತಾಲೂಕು ಹಾಗೂ ಗ್ರಾಮಗಳಿಗೆ ಪಠ್ಯಪುಸ್ತಕ ಪೂರೈಸುವುದಕ್ಕೆ ವಿಳಂಬವಾಗುತ್ತಿತ್ತು. ಹಾಗಾಗಿ, ಈ ವರ್ಷ ಬಿಇಒ ಕಚೇರಿಗೆ ನೇರವಾಗಿ ಪಠ್ಯಪುಸ್ತಕ ಪೂರೈಸಲಾಗಿದ್ದು, ಪಠ್ಯ ಪುಸ್ತಕಗಳನ್ನು ನಿಗದಿತ ಸಮಯಕ್ಕೆ ಮಕ್ಕಳಿಗೆ ನೀಡುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾ ಆರಂಭದ ದಿನದಂದೇ ಪಠ್ಯಪುಸ್ತಕ ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲ ಬಿಇಒ ಕಚೇರಿ ಮೂಲಕ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಲಾಗಿದೆ. ಪಠ್ಯಪುಸ್ತಕ ಕೊರತೆಯಾಗದಂತೆ ನಿಗಾ ವಹಿಸಲಾಗುವುದು.

ಲೀಲಾವತಿ ಹಿರೇಮಠ, ಡಿಡಿಪಿಐ ಬೆಳಗಾವಿ

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ