ಹಿರೇಕೆರೂರು: ತಾಲೂಕಿನ ಶಿಕ್ಷಣ ಗುಣಮಟ್ಟ ಹಾಗೂ ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿ ಶ್ರಮಿಸಬೇಕು. ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕು ಎಂದು ಶಾಸಕ ಯು.ಬಿ. ಬಣಕಾರ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಎಸ್ಎಸ್ಎಲ್‌ಸಿ ಫಲಿತಾಂಶ ಕುರಿತು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಅತ್ಯಂತ ಕಳಪೆ ಮಟ್ಟದಲ್ಲಿ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. 8ನೇ ತರಗತಿಯಿಂದ 10 ತರಗತಿಯವರೆಗೂ ಒಂದೇ ತರನಾಗಿ ಹೋಲುವಂತಹ ವಿಷಯಾಧಾರಿತ ಪಠ್ಯ ಪುಸ್ತಕಗಳಿರುತ್ತವೆ. ಮಕ್ಕಳಿಗೆ ಶಿಕ್ಷಕರು ಪ್ರತಿನಿತ್ಯ ಅವರ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಭಯಮುಕ್ತ ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದರು.
ಹಾವೇರಿ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ 2025ರ ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿ ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿ ಶಾಶ್ವತ ಸರ್ಕಾರಿ ಉದ್ಯೋಗಿಯಾಗಿರಬೇಕು. ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾಲಯಗಳು, ಖಾಸಗಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
ವಿದ್ಯಾರ್ಥಿಯ ಪಾಸ್‌ಪೋರ್ಟ್ ಛಾಯಾಚಿತ್ರ ಮತ್ತು ಪ್ರಮಾಣಿಕೃತ ಅಂಕಪಟ್ಟಿ, ಇಲಾಖೆಯ ಸೇವಾ ದೃಢೀಕರಣ ಪತ್ರ, ಜಿಲ್ಲಾ, ತಾಲೂಕು, ಯೋಜನಾ ಶಾಖೆಯ ಅಧ್ಯಕ್ಷರು, ಸಂಘದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರದೊಂದಿಗೆ ಮೇ 31ರೊಳಗಾಗಿ https Asgeanews.blogspot.comನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಶಾಖೆ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದ್ದಾರೆ.