ಗದಗ: ಇಡೀ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ಸಹಕಾರ ಸಂಘವನ್ನು ಸ್ಥಾಪಿಸಿ, ದೇಶಕ್ಕೆ ಕೀರ್ತಿ ತಂದ ಸಹಕಾರ ರಂಗದ ಪಿತಾಮಹ, ಕಣಗಿನಹಾಳದ ಯಜಮಾನರಾದ ಸಿದ್ದನಗೌಡ ಪಾಟೀಲ ಅವರ ಹೆಸರನ್ನು ನವೀಕೃತಗೊಂಡ ಗದಗ ರೈಲು ನಿಲ್ದಾಣಕ್ಕೆ ಇಡಬೇಕು ಎಂದು ಹಾಲುಮತ ಮಹಾಸಭಾದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಲಾಯಿತು. ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, 1905ರಲ್ಲಿ ಬ್ರಿಟಿಷರು ಸಹಕಾರ ಸಂಘವನ್ನು ಸ್ಥಾಪಿಸಲು ಹಲವಾರು ಜನರನ್ನು ಸಂಪರ್ಕಿಸಿದಾಗ ಯಾರೂ ಮುಂದೆ ಬರದಿದ್ದಾಗ ಕಣಗಿನಹಾಳ ಗ್ರಾಮದ ಯಜಮಾನ ಸಿದ್ದನಗೌಡ ಪಾಟೀಲ ಅವರು ಮುಂದೆ ಬಂದು ಗ್ರಾಮಸ್ಥರ ಪರವಾಗಿ ಮೂರು ಬೇಡಿಕೆಗಳಾದ ಕಣಗಿನಹಾಳ ಗ್ರಾಮಕ್ಕೆ ರೈಲು ನಿಲ್ದಾಣ ಸ್ಥಾಪನೆ, ಗ್ರಾಮದಲ್ಲಿ ಸರಕಾರಿ ಶಾಲೆ ನಿರ್ಮಾಣ ಹಾಗೂ ಗ್ರಾಮಕ್ಕೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಒಂದು ಬಾವಿಯನ್ನು ನಿರ್ಮಿಸಿದರೆ ಸಹಕಾರ ಸಂಘವನ್ನು ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ಅಂದಿನ ಬ್ರಿಟಿಷ್ ಅಧಿಕಾರಿ ಜೆಮ್ಸ್ ಮೆಕಾನಿಲ್ ಅವರು 1905ರ ಮೇ 6ರಂದು ಕಣಗಿನಹಾಳ ಗ್ರಾಮದಲ್ಲಿ ಬಾವಿಗೆ ಭೂಮಿಪೂಜೆ ಮಾಡಿದರು. ಮೇ 7 ರಂದು ರೈಲ್ವೆ ನಿಲ್ದಾಣಕ್ಕೆ ಭೂಮಿಪೂಜೆ ಮಾಡಿದರು. ಅದರಂತೆ ಸಿದ್ದನಗೌಡ ಪಾಟೀಲರು ಮೇ 8ರಂದು ಪ್ರಪ್ರಥಮ ಸಹಕಾರ ಸಂಘದ ನೋಂದಣಿ ಮಾಡಿಸಿದರು. ಅಲ್ಲದೇ ಅಂದಿನ ದಿನಗಳಲ್ಲಿ 2 ಸಾವಿರ ರು.ಗಳನ್ನು ಠೇವಣಿ ಇಟ್ಟು ಸಂಘವನ್ನು ಸ್ಥಾಪಿಸಿ ಸಹಕಾರ ರಂಗಕ್ಕೆ ಮುನ್ನುಡಿ ಬರೆದಿದ್ದು ಇತಿಹಾಸ. ಅಂತಹ ಮಹನೀಯರ ಹೆಸರನ್ನು ಶಾಶ್ವತವಾಗಿರಿಸಲು ಹಾಗೂ ಅವರ ಸಾಧನೆಗಳನ್ನು ಜನರಿಗೆ ಪರಿಚಯಿಸಲು ನವೀಕೃತಗೊಂಡ ರೈಲು ನಿಲ್ದಾಣಕ್ಕೆ ಕಣಗಿನಹಾಳದ ಯಜಮಾನರಾದ ಸಿದ್ದನಗೌಡ ಪಾಟೀಲ ಅವರ ಹೆಸರು ಇಡುವುದು ಸೂಕ್ತವಾಗಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಮುತ್ತು ಜಡಿ, ಪದಾಧಿಕಾರಿಗಳಾದ ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ, ಕುರುಬರ ಸಂಘ ಯುವ ಘಟಕದ ಅಧ್ಯಕ್ಷ ಮಂಜುನಾಥ ಜಡಿ, ಮುತ್ತು ಮುಸಿಗೇರಿ, ಹೇಮಂತ ಗಿಡ್ಡಹನುಮಣ್ಣವರ, ಕುಮಾರ ಮಾರನಬಸರಿ, ರವಿ ವಗ್ಗನವರ, ಸಿದ್ದು ಯಾಳವಾಡದ, ಮುರುಗೇಶ ಕೋಗಲಿ, ಹನುಮಂತ ಕಳ್ಳಿ, ಈರಪ್ಪ ತಾಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.