ಈಗಿರುವ ಕಟ್ಟುನಿಟ್ಟಾದ ಅರಣ್ಯ ಕಾನೂನಿನಡಿಯಲ್ಲೇ ಬದುಕುವುದು ಕಷ್ಟವಾಗುತ್ತಿದೆ. ಸಣ್ಣಪುಟ್ಟ ಕಟ್ಟಿಗೆ ತರುವುದು, ಮನೆ ಕಟ್ಟುವುದು ಇತ್ಯಾದಿ ಕಾರ್ಯಗಳಿಗೂ ತೊಂದರೆಯಾಗುತ್ತಿದೆ. ಹೀಗಿರುವಾಗ ಕಸ್ತೂರಿರಂಗನ್ ವರದಿಯೂ ಜಾರಿಯಾದರೆ ಜಿಲ್ಲೆಯ ಜನರ ಬದುಕನ್ನೇ ಕಸಿದುಕೊಂಡಂತೆ ಆಗುತ್ತದೆ.
ಯಲ್ಲಾಪುರ: ಕಸ್ತೂರಿರಂಗನ್ ವರದಿಯನ್ನು ರಾಜ್ಯದ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ವಿರೋಧಿಸಿ, ಒಕ್ಕೊರಲ ನಿರ್ಣಯ ಕೈಗೊಳ್ಳಬೇಕೆಂದು ಶಾಸಕ ಶಿವರಾಮ ಹೆಬ್ಬಾರ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ಜಿಲ್ಲೆಯ 567 ಗ್ರಾಮಗಳು ವರದಿಯಡಿ ಬಾಧಿತವೆಂದು ಹೇಳಲಾಗಿದೆ. ಯಲ್ಲಾಪುರ ಕ್ಷೇತ್ರದ 130 ಗ್ರಾಮಗಳ ಪೈಕಿ 84 ಗ್ರಾಮಗಳು ಬಾಧಿತವೆಂದು ಗುರುತಿಸಲಾಗಿದೆ. ವರದಿಯ ಅನುಷ್ಠಾನದಿಂದ ಮತ್ತಷ್ಟು ಸಮಸ್ಯೆಗಳು ಹೆಚ್ಚಲಿವೆ. ಕಸ್ತೂರಿರಂಗನ್ ವರದಿ ಮತ್ತು ಗಾಡ್ಗೀಳ್ ವರದಿಗೂ ತೀರಾ ವ್ಯತ್ಯಾಸವಿದೆ. ಅದನ್ನು ಸರ್ಕಾರ ಗಮನಿಸಬೇಕು ಎಂದು ವಿವರಿಸಿದರು.ಜಿಲ್ಲೆ ರಾಜ್ಯ, ದೇಶಕ್ಕಾಗಿ ಸರ್ಕಾರದ ಹಲವಾರು ಯೋಜನೆಗಳಿಗೆ ತ್ಯಾಗ ಮಾಡಿದೆ. 5 ನೀರಾವರಿ ಯೋಜನೆಗಳಿಗೆ, 5 ಜಲವಿದ್ಯುತ್ ಯೋಜನೆ, ಕೈಗಾ ಅಣುಸ್ಥಾವರದ 6 ಘಟಕ, ಸೀಬರ್ಡ್ ನೌಕಾನೆಲೆ, ಹುಲಿ ಮತ್ತು ವನ್ಯಜೀವಿ ಸಂರಕ್ಷಿತ ಪ್ರದೇಶ ಹೀಗೆ ಹತ್ತಾರು ನೆಲೆಯಲ್ಲಿ ದೇಶಕ್ಕಾಗಿ ದೊಡ್ಡ ತ್ಯಾಗವನ್ನು ನಮ್ಮ ಜಿಲ್ಲೆ ಮಾಡಿದೆ. ಈಗಿರುವ ಕಟ್ಟುನಿಟ್ಟಾದ ಅರಣ್ಯ ಕಾನೂನಿನಡಿಯಲ್ಲೇ ಬದುಕುವುದು ಕಷ್ಟವಾಗುತ್ತಿದೆ. ಸಣ್ಣಪುಟ್ಟ ಕಟ್ಟಿಗೆ ತರುವುದು, ಮನೆ ಕಟ್ಟುವುದು ಇತ್ಯಾದಿ ಕಾರ್ಯಗಳಿಗೂ ತೊಂದರೆಯಾಗುತ್ತಿದೆ. ಹೀಗಿರುವಾಗ ಕಸ್ತೂರಿರಂಗನ್ ವರದಿಯೂ ಜಾರಿಯಾದರೆ ಜಿಲ್ಲೆಯ ಜನರ ಬದುಕನ್ನೇ ಕಸಿದುಕೊಂಡಂತೆ ಆಗುತ್ತದೆ ಎಂದ ಹೆಬ್ಬಾರ್ ಮಾರ್ಮಿಕವಾಗಿ ಎಳೆ ಎಳೆಯಾಗಿ ಅಧಿವೇಶನದಲ್ಲಿ ವಿವರಿಸಿದರು.
ಪಶ್ಚಿಮ ಘಟ್ಟಗಳ ಕುರಿತಾದ ಮಾಧವ ಗಾಡ್ಗೀಳ್ ವರದಿ ಹಾಗೂ ಕಸ್ತೂರಿರಂಗನ್ ವರದಿಗಳ ನಡುವೆ ಭಾರಿ ವ್ಯತ್ಯಾಸವಿದೆ. ವರದಿಯ ಅನುಷ್ಠಾನಗೊಳ್ಳಬಹುದಾದ ಜಿಲ್ಲೆಗಳಿಗೆ ಮುಖ್ಯಮಂತ್ರಿಗಳು ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ, ಜನರ ಅಭಿಪ್ರಾಯ ಪಡೆದಿದ್ದಾರೆ. ಇನ್ನುಳಿದ ಜಿಲ್ಲೆಗಳಿಗೆ ಭೇಟಿ ನೀಡಿ, ಅಭಿಪ್ರಾಯ ಸಂಗ್ರಹಿಸಿ, ರಾಜ್ಯದ ಹಿತಕ್ಕಾಗಿ ವರದಿಯನ್ನು ವಿರೋಧಿಸುವ ನಿರ್ಣಯ ಮಾಡಬೇಕೆಂದು ಆಗ್ರಹಿಸಿದರು.ಅತಿಕ್ರಮಣ ಜಾಗದಲ್ಲಿರುವ ಮನೆಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ನಿರ್ಣಯ ಸೂಕ್ತವಲ್ಲ. ಶೇ. 84ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಮನೆಗಳು ಅರಣ್ಯ ಪ್ರದೇಶದಲ್ಲೇ ಇವೆ. ಪಾರಂಪರಿಕ ಅರಣ್ಯವಾಸಿಗಳು, ಬುಡಕಟ್ಟು ಸಮುದಾಯದವರು, ಸಾಮೂಹಿಕ ಅರಣ್ಯದಲ್ಲಿ ವಾಸಿಸುವವರು ಸೇರಿ 73,850 ಕುಟುಂಬಗಳು ನೆಲೆ ಕಳೆದುಕೊಳ್ಳುವ ಅಪಾಯವಿದೆ.ಸರ್ಕಾರದಿಂದ ಮನೆ ಮಂಜೂರಿ ಮಾಡಿ, ಪಡಿತರ ಚೀಡಿ, ನೀರು, ವಿದ್ಯುತ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಈಗ ಏಕಾಏಕಿ ತೆರಿಗೆ ವ್ಯಾಪ್ತಿಯಿಂದ ಕೈಬಿಡುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಕುರಿತು ಈಗಾಗಲೇ ಪಂಚಾಯತ್ ರಾಜ್ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.