ರೈತರ ಜಾತ್ರೆ ಎಂದೇ ಕರೆಯುವ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳವು ಈ ಬಾರಿ ಸಶಕ್ತ ಮಹಿಳೆ-ಸುಸ್ಥಿರ ಕೃಷಿ ಘೋಷವಾಕ್ಯದ ಅಡಿ ಸೆ. 25ರಿಂದ 28ರ ವರೆಗೆ ನಾಲ್ಕು ದಿನ ನಡೆಯಲಿದೆ.
ಧಾರವಾಡ:ರೈತರ ಜಾತ್ರೆ ಎಂದೇ ಕರೆಯುವ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳವು ಈ ಬಾರಿ ಸಶಕ್ತ ಮಹಿಳೆ-ಸುಸ್ಥಿರ ಕೃಷಿ ಘೋಷವಾಕ್ಯದ ಅಡಿ ಸೆ. 25ರಿಂದ 28ರ ವರೆಗೆ ನಾಲ್ಕು ದಿನ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಡಾ. ಎನ್.ಬಿ. ಪ್ರಕಾಶ, ಸುಸ್ಥಿರ ಕೃಷಿಗಾಗಿ ತಾಂತ್ರಿಕತೆಗಳು, ಬೀಜ ಮೇಳ, ನೈಸರ್ಗಿಕ ಮತ್ತು ಸಾವಯವ ಕೃಷಿ, ಮಹಿಳಾ ಸ್ವಸಹಾಯ ಗುಂಪುಗಳ ಸಾಧನೆ, ಕೃಷಿ ಉತ್ಫನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿ ನವೋದ್ಯಮಗಳು, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ, ಕೃಷಿ ಅರಣ್ಯ, ಪಶು ಸಂಗೋಪನೆ, ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ, ಕೃಷಿ ವಿವಿ ಸಾಧನೆಯ ಕ್ಷೇತ್ರ ಭೇಟಿ ಅಂತಹ ವಿಶೇಷತೆಗಳಿವೆ ಎಂದರು.ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಆವರಣದಲ್ಲಿ ಜಾನುವಾರು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಹೈಟೆಕ್ ತೋಟಗಾರಿಕೆ, ವಿಶೇಷ ಸಾಧನೆಗೈದ ಮಹಿಳಾ ರೈತರೊಂದಿಗೆ ಸಂವಾದ, ಕೃಷಿಯಲ್ಲಿ ಡ್ರೋನ್ ಬಳಕೆ ಸೇರಿದಂತೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ನವೀನ ಆವಿಷ್ಕಾರಗಳು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಈ ಮೇಳವನ್ನು ರೂಪಿಸಲಾಗಿದೆ ಎಂದು ಡಾ.ಎನ್.ಬಿ. ಪ್ರಕಾಶ ಹೇಳಿದರು.
ಕೃಷಿ ಮೇಳದಲ್ಲಿ 168 ಹೈಟೆಕ್ ಮಳಿಗೆ, 293 ಸಾಮಾನ್ಯ ಮಳಿಗೆ, 75 ಯಂತ್ರೋಪಕರಣಗಳ ಮಳಿಗೆ, 28 ಟ್ರ್ಯಾಕ್ಟರ್ ಮಳಿಗೆ, 30 ಆಹಾರ ಮಳಿಗೆಗಳು ಸೇರಿದಂತೆ ಒಟ್ಟು 625 ಮಳಿಗೆ ಹಾಕಲಾಗಿದ್ದು, ಸುಮಾರು 20 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಮೇಳಕ್ಕೆ ಬರುವ ಪ್ರತಿಯೊಬ್ಬರ ನೋಂದಣಿ ಹಾಗೂ ವಿಮಾ ವ್ಯವಸ್ಥೆ ಸಹ ಮಾಡಲಾಗಿದೆ. ಬೀಜ ಮೇಳದಲ್ಲಿ 390 ಕ್ವಿಂಟಲ್ ವಿವಿಧ ಹಿಂಗಾರಿ ಬೀಜ ಮಾರಾಟ ಸಹ ಮಾಡಲು ಯೋಜಿಸಲಾಗಿದೆ ಎಂದರು.ಸ್ಮಾರ್ಟ್ ಕೃಷಿ:
ವಿವಿ ಒಂದು ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಕೃಷಿ ತಂತ್ರಜ್ಞಾನಗಳಾದ ಎಐ ಆಧಾರಿತ ಕೊಳವೆ ಬಾವಿ ನೀರು ನಿರ್ವಹಣಾ ವ್ಯವಸ್ಥೆ, ಎಐ ಆಧಾರಿತ ಮೊಳಕೆ ಹಂತದ ಕಳೆ ತೆಗೆಯುವ ಯಂತ್ರ, ದ್ರಾಕ್ಷಿ ಬೆಳೆಗೆ ಕೃಷಿ ಸಲಹೆ ಮತ್ತು ಮಾರ್ಗದರ್ಶನ ಆಪ್, ಸ್ವಯಂ ಚಾಲಿತ ಸಮರ್ಪಕ ಸಿಂಪಡಣೆ ಡ್ರೋಣ, ಸೌರಶಕ್ತಿ ಚಾಲಿತ ಮೂರು ಸಾಲಿನ ಕಡಲೆ ನಿಪ್ಟಿಂಗ್ ಯಂತ್ರ, ಬ್ಯಾಟರಿ ಮತ್ತು ಮೊಬೈಲ್ ಮೂಲಕ ಸ್ವಯಂ ಚಾಲಿತ ವಾಲ್ವ್ ಅಂತಹ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಯೂ ಇದೆ ಎಂದು ಕುಲಪತಿ ಡಾ. ಎನ್.ಬಿ. ಪ್ರಕಾಶ ಹೇಳಿದರು.2ನೇ ದಿನ ಉದ್ಘಾಟನೆ:
ಕೃಷಿ ಮೇಳದ ಮೊದಲ ದಿನ ಸೆ. 25ರಂದು ಬೆಳಗ್ಗೆ 11.30ಕ್ಕೆ ಬೀಜ ಮೇಳವನ್ನು ಶಾಸಕ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದಾರೆ. ಮೇಳದ 2ನೇ ದಿನ ಸೆ. 26ರಂದು ಮಧ್ಯಾಹ್ನ 2ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮೇಳಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮ್ಮದ್, ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್. ಪಾಟೀಲ ಭಾಗವಹಿಸುತ್ತಾರೆ. ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಕೃಷಿ ಪ್ರಕಟಣೆ ಹಾಗೂ ಹೊಸ ತಳಿಗಳನ್ನು ಬಿಡುಗಡೆ ಮಾಡುವರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.