ಶಿರಸಿ: ₹೧೫ ಸಾವಿರ ಮಾಸಿಕ ವೇತನ ನಿಗದಿ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಿ ಅಧಿವೇಶನದಲ್ಲಿ ಘೋಷಿಸಬೇಕು ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ಗುರುವಾರ ನಗರದ ಹಳೆ ಬಸ್ ನಿಲ್ದಾಣ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗೆ ಮನವಿಪತ್ರ ರವಾನಿಸಿದರು.ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು- ವೆಚ್ಚಗಳಿಗೆ ಅನುಗುಣವಾಗಿ ಮಾಸಿಕ ಕನಿಷ್ಠ ₹೨೦೦೦ ಗೌರವಧನ ಹೆಚ್ಚಿಗೆ ಮಾಡಬೇಕು. ಮೊಬೈಲ್ ಕೆಲಸ ಒತ್ತಾಯಪೂರ್ವಕವಾಗಿ ಮಾಡಿಸುವುದನ್ನು ಕೈಬಿಡಬೇಕು, ಇಲ್ಲವೇ ಮೊಬೈಲ್ ಡಾಟಾ ಒದಗಿಸಿ, ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹಧನ ನಿಗದಿ ಮಾಡಬೇಕು.
ಆಶಾ ಸೇವೆಯಲ್ಲಿ ಇದ್ದಾಗ ಆಗುವ ಅನಾಹುತಗಳಿಗೆ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಚ್ಯುಟಿ, ಪಿಎಫ್- ಇಎಸ್‌ಐ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕಳೆದ ೧೦ ತಿಂಗಳ ಹಿಂದೆ ನಡೆದ ಹೋರಾಟದಲ್ಲಿ ಭರವಸೆ ಇತ್ತ ಮೇಲೆ ಹೋರಾಟ ಹಿಂತೆಗೆದುಕೊಳ್ಳಲಾಗಿತ್ತು. ಆದರೆ ಈವರೆಗೂ ಈ ಬಗ್ಗೆ ಹದಿಮೂರು ಬಾರಿ ಸಭೆಗಳಾದರೂ ವೇತನ ಹೆಚ್ಚಳ ಮಾಡುವ ಯಾವುದೇ ಕಿಂಚಿತ್ತೂ ಭರವಸೆ ನೀಡಿಲ್ಲ. ಈಗಲಾದರೂ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಜಿಲ್ಲಾ ಅಧ್ಯಕ್ಷೆ ಪದ್ಮ ಚಲುವಾದಿ, ಜಿಲ್ಲಾ ಉಪಾಧ್ಯಕ್ಷರಾದ ಅನ್ನಪೂರ್ಣ ನಾಯ್ಕ, ಲಕ್ಷ್ಮೀ ನಾಯ್ಕ, ಅರ್ಚನಾ ನಾಯ್ಕ, ಚಾಂದ್ ಬಿ., ಸುಷ್ಮಾ ಮಡಿವಾಳ, ಆಶಾ ಭಂಡಾರಿ, ವೀಣಾ ಜಾಡರಾಮಕುಂಟೆ, ಪ್ರೇಮಾ ದಿಂಡವಾರ, ಈರಮ್ಮ ವಿರಕ್ತಮಠ, ಮಂಜುಳಾ ಪಾಟೀಲ್, ಲಕ್ಷ್ಮೀಬಂಗಾರಿ ಮತ್ತಿತರರು ಇದ್ದರು.ನೆಗ್ಗು ಗ್ರಾಪಂ ಪಿಡಿಒ ವರ್ಗಾವಣೆಗೆ ಸಾರ್ವಜನಿಕರ ಆಗ್ರಹಶಿರಸಿ: ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ನೆಗ್ಗು ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸ್ಥಳೀಯರು ಪತ್ರ ಬರೆದು ಆಗ್ರಹಿಸಿದ್ದಾರೆ.ನೆಗ್ಗು ಪ್ರಾಪಂ ಅಭಿವೃದ್ಧಿ ಅಧಿಕಾರಿ ಮಮತಾ ಗುಡ್ಡದಮನೆ ಕಳೆದ ೧೧ ವರ್ಷಗಳಿಂದ ಈ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಬಗ್ಗೆ ಅಸಡ್ಡೆ ವರ್ತನೆ ತೋರುತ್ತಿದ್ದಾರೆ. ಆಡಳಿತದ ವಿಚಾರದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು, ಅನುದಾನ ಹಂಚಿಕೆ, ಬಸವ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ಆಡಳಿತಾತ್ಮಕ ನಿಯಮ ಪಾಲನೆ ಮಾಡುತ್ತಿಲ್ಲ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮೀಸಲಿಟ್ಟ ಅನುದಾನವನ್ನು ಬೇರೆ ಬೇರೆ ಕಾಮಗಾರಿಗಳಿಗೆ ಬಳಕೆ ಮಾಡಿಕೊಂಡು ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನ ಮಾಡದಿರುವ ಕಾರಣ ನೆಗ್ಗು ಗ್ರಾಪಂ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ.ಗ್ರಾಪಂ ಕಟ್ಟಡಕ್ಕೆ ಕ್ರಿಯಾ ಯೋಜನೆಯಲ್ಲಿ ನರೇಗಾ ಯೋಜನೆಯ ಅನುದಾನ ₹೧೬.೨೫ ಲಕ್ಷ ಮಂಜೂರಾಗಿದ್ದು, ೧೪ ಮತ್ತು ೧೫ನೇ ಹಣಕಾಸು ಯೋಜನೆಯ ಹಣವನ್ನೂ ಬಳಸಿಕೊಂಡು ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದೆ. ೧೫ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕಳೆದ ೩ ವರ್ಷಗಳಲ್ಲಿ ಪ್ರತಿವರ್ಷ ₹೫ ಲಕ್ಷದಂತೆ ಮೀಸಲಿಟ್ಟು ಒಟ್ಟೂ ₹೧೫ ಲಕ್ಷ ಕಟ್ಟಡಕ್ಕೆ ವ್ಯಯಿಸಲಾಗಿದೆ. ನರೇಗಾ ಯೋಜನೆಯಲ್ಲಿ ಗ್ರಾಪಂಗೆ ಬರಬಹುದಾದ ಹೆಚ್ಚಿನ ಹಣವನ್ನು ಪಂಚಾಯಿತಿ ಕಟ್ಟಡಕ್ಕೆ ಬಳಕೆ ಮಾಡಿಕೊಂಡಿದ್ದು, ಸಾರ್ವಜನಿಕ ಕಾಮಗಾರಿಗಾಗಿ ನರೇಗಾ ಯೋಜನೆಯ ಹಣವನ್ನು ಮೀಸಲಿಡಲಿಲ್ಲ ಎಂದಿದ್ದಾರೆ.