ಧಾರವಾಡ:
ಬೆಳಗಾವಿ ವಿಷಯದಲ್ಲಿ ಎಂಇಎಸ್, ಶಿವಸೇನೆ ಮುಖಂಡರ ಪುಂಡಾಟಿಕೆ ಹಾಗೂ ದೇಶದ್ರೋಹಿ ಹೇಳಿಕೆ ಖಂಡಿಸಿ ಗುರುವಾರ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆ ಸದಸ್ಯರು ಎಂಇಎಸ್ ಹಾಗೂ ಶಿವಸೇನೆ ಮುಖಂಡರ ಭಾವಚಿತ್ರಗಳನ್ನು ಕತ್ತೆಗೆ ಹಾಕಿ ಮೆರವಣಿಗೆ ನಡೆಸಿದರು. ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಎಂಇಎಸ್ ಹಾಗೂ ಶಿವಸೇನೆ ಪದೇ ಪದೇ ಕನ್ನಡಿಗರನ್ನು ಕೆಣಕುವ ಕೆಲಸ ಮಾಡುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯ ಪುಂಡರು ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ವೇಳೆ ಮಹಾಮೇಳಾವ್ ನಡೆಸುವುದಾಗಿ ಹೇಳಿದ್ದಾರೆ. ಜತೆಗೆ ಉದ್ಭವ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಹಾಗೂ ಒಕ್ಕೂಟ ವ್ಯವಸ್ಥೆಯ ವಿರೋಧಿ ನೀತಿಯಾಗಿದೆ. ನಮ್ಮ ರಾಜ್ಯದ ಜಲ, ನೆಲ, ಭಾಷೆ, ಗಡಿಯ ವಿಚಾರಕ್ಕೆ ಬಂದರೆ ನಮ್ಮ ಪ್ರಾಣವನ್ನೆ ಕೊಡಲು ಸಿದ್ಧರಿದ್ದೇವೆ. ಎಂಇಎಸ್ ಹಾಗೂ ಶಿವಸೇನೆಯ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆ ಸದಸ್ಯರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಸಂಘಟಣೆ ಧಾರವಾಡ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ರವಿ ಸಿದ್ದಾಟಗಿಮಠ, ವಿರುಪಾಕ್ಷಿ ಹುಬ್ಬಳ್ಳಿಮಠ, ಲಕ್ಷ್ಮಣ ದೊಡ್ಡಮನಿ, ಕಲ್ಲಪ್ಪ ಸೀಗಿಹಳ್ಳಿ, ಚಂದ್ರು ಅಂಗಡಿ, ಶರೀಫ್ ಅಮ್ಮಿನಭಾವಿ, ಕರೆಪ್ಪ ಮಾಳಗಿಮನಿ, ಶಿದ್ದಪ್ಪ ಹೆಗಡೆ, ನಾರಾಯಣ ಮಾದರ, ಹನುಮಂತ ಮೊರಬ, ಶಬ್ಬಿರ ಅತ್ತಾರ, ಯುಸುಫ್ ದೊಡ್ಡವಾಡ, ಮಂಜುನಾಥ ಸುತಗಟ್ಟಿ, ಪರಶುರಾಮ ದೊಡ್ಡಮನಿ, ಎಂ.ಎನ್. ಮಲ್ಲೂರ, ಮುತ್ತು ಕುಲಕರ್ಣಿ, ವಿನಾಯಕ ಜಿ.ಜಿ, ಪಂಚಯ್ಯ ಪೂಜಾರ ರಿಯಾಜ ನದಾಫ್ ಇದ್ದರು.