ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆ ಮುಂದೂಡಲು ಒತ್ತಾಯ

KannadaprabhaNewsNetwork |  
Published : Oct 24, 2026, 02:45 AM IST
ಯಲಬುರ್ಗಾ ಪಟ್ಟಣದ ಟಿಎಪಿಸಿಎಂಎಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಸಂಘದ 67ನೇ ವಾರ್ಷಿಕ ಮಹಾಸಭೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಕೆಲವು ಶೇರುದಾರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. | Kannada Prabha

ಸಾರಾಂಶ

ಯಲಬುರ್ಗಾ ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಕಾರ್ಯಾಲಯದಲ್ಲಿ ಗುರುವಾರ ನಡೆದ ಸಂಘದ 67ನೇ ವಾರ್ಷಿಕ ಮಹಾಸಭೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಕೆಲವರ ಶೇರುದಾರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಯಲಬುರ್ಗಾ: ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಕಾರ್ಯಾಲಯದಲ್ಲಿ ಗುರುವಾರ ನಡೆದ ಸಂಘದ 67ನೇ ವಾರ್ಷಿಕ ಮಹಾಸಭೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಕೆಲವರ ಶೇರುದಾರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯನ್ನು ಮುಂದೂಡುವಂತೆ ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ರಾಜೂರು ಸೇರಿದಂತೆ ಹಲವು ಸದಸ್ಯರು ಆಗ್ರಹಿಸಿದರು.

ಆಡಳಿತಾಧಿಕಾರಿ ಶಾಕಿರಬಾನು ನೇತೃತ್ವದಲ್ಲಿ ಸಭೆ ಆರಂಭವಾಗುತ್ತಿದ್ದಂತೆ, ಆಡಳಿತಾಧಿಕಾರಿಗಳಿಗೆ ಸಭೆ ನಡೆಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಯನ್ನು ಬಸವರಾಜ ರಾಜೂರು ಎತ್ತಿದರು. ನಿಮಗೆ ಯಾರು ಸಭೆ ನಡೆಸಲು ಆದೇಶ ನೀಡಿದ್ದಾರೆ? ಆ ಆದೇಶದ ಪ್ರತಿಯನ್ನು ನಮಗೆ ನೀಡಿ. ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿಗಳಿಗೆ ಮುಂದುವರಿಯಲು ಅವಕಾಶವಿಲ್ಲ ಎಂದು ಹೇಳಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಶಾಕಿರಬಾನು, ಮೇಲಧಿಕಾರಿಗಳ ಸೂಚನೆಯ ಮೇರೆಗೆ ಸಭೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ವಿಚಾರವಾಗಿ ಕೆಲಕಾಲ ವಾಗ್ವಾದ ನಡೆಯಿತು.

ಇದೇ ವೇಳೆ, ರೈತ ಗೌಬುಸಾಬ ತಳಕಲ್ ಅವರು ಸಭೆ ನಡೆಯಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿ, ರೈತರ ಸೇವೆಗೆ ಸಂಬಂಧಿಸಿದ ಹಾಜರಾತಿ ಪುಸ್ತಕವನ್ನು ತೆಗೆದುಕೊಂಡು ತೆರಳಿದರು. ಬೇಕಾದರೆ ನನ್ನ ವಿರುದ್ಧ ದೂರು ದಾಖಲಿಸಿ ಎಂದು ಅವರು ಸವಾಲು ಹಾಕಿದರು ಎನ್ನಲಾಗಿದೆ. ಸಂಘದ ದಾಖಲಾತಿಗಳನ್ನು ಈ ರೀತಿ ತೆಗೆದುಕೊಂಡು ಹೋಗುವುದು ಸರಿಯಲ್ಲ ಎಂದು ಕೆಲವು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಮುಂದೂಡಲು ಸದಸ್ಯರ ಒತ್ತಾಯ: ಸಹಕಾರ ಇಲಾಖೆಯ ಕಾಯ್ದೆಯ ಪ್ರಕಾರ ಆಡಳಿತಾಧಿಕಾರಿಗೆ ವಾರ್ಷಿಕ ಮಹಾಸಭೆ ನಡೆಸುವ ಅಧಿಕಾರವಿಲ್ಲ ಎಂದು ಆಕ್ಷೇಪಿಸಿದ ಕೆಲವು ಸದಸ್ಯರು, ಸಭೆಯನ್ನು ರದ್ದುಪಡಿಸಬೇಕು ಅಥವಾ ಮುಂದೂಡಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ, ಸಭೆ ನಡೆಸಬೇಕು ಎಂದು ಒತ್ತಾಯಿಸಿದ ಕೆಲವು ಸದಸ್ಯರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗೌಬುಸಾಬ ಅವರು ಮರಳಿ ಪುಸ್ತಕ ನೀಡಿದರು.

ಸಭೆ ನಡೆಸಿ ವಾರ್ಷಿಕ ವರದಿ ಮಂಡಿಸಲಾಗಿದೆ: ಈ ಕುರಿತು ಸ್ಪಷ್ಟನೆ ನೀಡಿದ ಟಿಎಪಿಸಿಎಂಎಸ್ ಆಡಳಿತಾಧಿಕಾರಿ ಶಾಕಿರಬಾನು, ಸಂಘದ 67ನೇ ವಾರ್ಷಿಕ ಮಹಾಸಭೆಯನ್ನು ಸೆ. 25ರಂದು ಆಯೋಜಿಸಲಾಗಿತ್ತು. ಆದರೆ, ಸದಸ್ಯರ ಕೋರಂ ಕೊರತೆಯಿಂದಾಗಿ ಸಭೆ ನಡೆಯಲಿಲ್ಲ. ಹೀಗಾಗಿ ಅ. 22ರಂದು ಸಭೆ ನಡೆಸಲಾಗಿದೆ. ಸಭೆಗೆ ಹಾಜರಾಗುವಂತೆ ಎಲ್ಲ ಸದಸ್ಯರಿಗೂ 15 ದಿನಗಳ ಮುಂಚಿತವಾಗಿ ಅಂಚೆ ಮೂಲಕ ನೋಟಿಸ್ ನೀಡಲಾಗಿತ್ತು. ಸಭೆಗೆ ಬಂದ ಸದಸ್ಯರು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಏಕಾಏಕಿ ಸಭೆ ಮುಂದೂಡುವಂತೆ ಮನವಿ ಮಾಡಿದರೂ, ಸಭೆಯನ್ನು ಮುಂದೂಡಲು ಸಾಧ್ಯವಾಗಲಿಲ್ಲ. ಸಭೆ ನಡೆಸಿ ವಾರ್ಷಿಕ ವರದಿ ಮಂಡಿಸಲಾಗಿದೆ. ಹಾಜರಾತಿ ಪುಸ್ತಕವನ್ನು ತೆಗೆದುಕೊಂಡು ಹೋದ ಗೌಬುಸಾಬ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೇಲಧಿಕಾರಿಗಳ ನಿರ್ದೇಶನದಂತೆ ವಾರ್ಷಿಕ ಮಹಾಸಭೆ ನಡೆಸಿದ್ದೇನೆ ಎಂದು ತಿಳಿಸಿದರು.

ಸಭೆಯನ್ನು ಮುಂದೂಡುವಂತೆ ಬಸವರಾಜ ರಾಜೂರು ನೇತೃತ್ವದಲ್ಲಿ ಸದಸ್ಯರು ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆಡಳಿತಾಧಿಕಾರಿ ಹಾಗೂ ಸಂಘದ ವ್ಯವಸ್ಥಾಪಕರೊಂದಿಗೆ ಸದಸ್ಯರು ವಾಗ್ವಾದ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಡಿ ಇಗ್ಗುತ್ತಪ್ಪ ಸನ್ನಿಧಿ: 27ರಂದು ‘ಪತ್ತಾಲೋಧಿ’ ಆರಾಧನೆ
ಡಾ.ಹೆಗ್ಗಡೆ ಪಟ್ಟಾಭಿಷೇಕ 59ನೇ ವರ್ಧಂತಿ ಇಂದು