ಯಲಬುರ್ಗಾ ತಾಲೂಕಿನಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ತಕ್ಷಣವೇ ಹೋಬಳಿವಾರು ಸಮೀಕ್ಷೆ ನಡೆಸಿ, ರೈತರಿಗೆ ವೈಜ್ಞಾನಿಕ ಸಲಹೆ, ಅಗತ್ಯ ತಾಂತ್ರಿಕ ನೆರವು ಹಾಗೂ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲು ಮುಂದಾಗಬೇಕಿದೆ.
ಪಾಲಾಕ್ಷ ಬಿ. ತಿಪ್ಪಳ್ಳಿ
ಯಲಬುರ್ಗಾ: ರಾಜ್ಯದಲ್ಲಿ ಸತತ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಯಲಬುರ್ಗಾ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆಗಾರರು ಆತಂಕ ಎದುರಿಸುವಂತಾಗಿದೆ.
ಬೆಳೆ ಹೂವು ಬಿಟ್ಟು ಕಾಯಿ ಕಟ್ಟುವ ಹಂತದಲ್ಲಿರುವಾಗಲೇ ಮಳೆಯ ಅಭಾವ ಎದುರಾಗಿರುವುದರಿಂದ ತೊಗರಿ ಗಿಡಗಳು ಒಣಗುತ್ತಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಬಹುದೆಂಬ ಆತಂಕದಲ್ಲಿದ್ದಾರೆ.
ತಾಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದೆ. ಇದರಿಂದ ತೊಗರಿ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದ್ದು, ಹೂವು ಉದುರುವಿಕೆ, ಕಾಯಿ ಕಟ್ಟುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ತೊಗರಿ ಬೆಳೆ ಒಣಗುತ್ತಿರುವುದು ರೈತರ ಚಿಂತೆಯನ್ನು ಹೆಚ್ಚಿಸಿದೆ.
ತೊಗರಿ ಬಿತ್ತನೆ ಮತ್ತು ಗುರಿ: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಈ ಬಾರಿ ತೊಗರಿ ಬೆಳೆಯು ಬಿತ್ತನೆ ಗುರಿ ಮೀರಿ ಸಾಧನೆಯಾಗಿದೆ. ಈ ಬಾರಿ ಉಭಯ ತಾಲೂಕಿನಲ್ಲಿ ಒಟ್ಟು 6,570 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ೮೭೫೨ ಹೆಕ್ಟೇರ್ ಬಿತ್ತನೆ ಸಾಧನೆಯಾಗಿದೆ. ಗುರಿಗಿಂತ ೨೧೮೨ ಹೆಚ್ಚುವರಿ ಬಿತ್ತನೆಯಾಗಿದೆ.
ತೊಗರಿ ಬೆಳೆಗೆ ಕೀಟಬಾಧೆ: ತೊಗರಿ ಬೆಳೆಗೆ ವಿವಿಧ ಕೀಟಗಳ ಬಾಧೆ ಕಾಣಿಸಿಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ರೈತರು ಕೃಷಿ ಔಷಧಿ ಅಂಗಡಿಗಳತ್ತ ಮುಖ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಬೀಜ, ಭೂಮಿ ಹದಗೊಳಿಸುವಿಕೆ, ಬಿತ್ತನೆ, ಕಳೆ ತೆಗೆಯುವಿಕೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗೆ ಹಣ ಖರ್ಚು ಮಾಡಿರುವ ರೈತರಿಗೆ ಔಷಧಿ ಸಿಂಪಡಣೆಯ ಹೆಚ್ಚುವರಿ ಹೊರೆ ಎದುರಾಗಿದೆ.
ಹೋಬಳಿವಾರು ಸಮೀಕ್ಷೆ ನಡೆಸಲು ಒತ್ತಾಯ: ಯಲಬುರ್ಗಾ ತಾಲೂಕಿನ ವಿವಿಧ ಹೋಬಳಿಗಳಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿದ ರೈತರು ಮಳೆ ಕೊರತೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೃಷಿ ಇಲಾಖೆ ಸಮಗ್ರ ಸಮೀಕ್ಷೆ ನಡೆಸಬೇಕಾಗಿದೆ. ಬೆಳೆ ಹಾನಿಯ ಪ್ರಮಾಣವನ್ನು ಪರಿಶೀಲಿಸಿ ಸರ್ಕಾರದ ನಿಯಮಾನುಸಾರ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ನಿರೀಕ್ಷೆಯಾಗಿದೆ.
ಯಲಬುರ್ಗಾ ತಾಲೂಕಿನಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ತಕ್ಷಣವೇ ಹೋಬಳಿವಾರು ಸಮೀಕ್ಷೆ ನಡೆಸಿ, ರೈತರಿಗೆ ವೈಜ್ಞಾನಿಕ ಸಲಹೆ, ಅಗತ್ಯ ತಾಂತ್ರಿಕ ನೆರವು ಹಾಗೂ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಲು ಮುಂದಾಗಬೇಕಿದೆ. ಈ ಬಾರಿ ತಾಲೂಕಿನಲ್ಲಿ ತೊಗರಿ ಬಿತ್ತನೆ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಧನೆಯಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ತೇವಾಂಶ ಕೊರತೆಯಿಂದ ಬಾಡುತ್ತಿದೆ. ಕೆಲವು ಕಡೆ ಕೀಟಬಾಧೆ ಕಂಡುಬರುತ್ತಿದೆ. ಮಳೆ ಕೊರತೆಯಿಂದ ಹಾನಿಗೊಳಗಾದ ಬೆಳೆಗಳ ಸ್ಥಿತಿ ಪರಿಶೀಲಿಸಿ, ಸರ್ಕಾರದ ನಿಯಮಾವಳಿಗಳ ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.