ಸ್ಮಶಾನ ಜಾಗ ಖಾಸಗೀಕರಣ ಆರೋಪ

KannadaprabhaNewsNetwork |  
Published : Aug 06, 2026, 01:15 AM IST
56 | Kannada Prabha

ಸಾರಾಂಶ

ಕರಿಗಾಳ ಗ್ರಾಮದ ಸರ್ವೇ ಸಂಖ್ಯೆ 301ರಲ್ಲಿ ಇರುವ ಸುಮಾರು 1.31 ಎಕರೆ ಜಾಗವನ್ನು ಹಲವು ದಶಕಗಳಿಂದ ವಡ್ಡರಪಾಳ್ಯ ಗ್ರಾಮಸ್ಥರು ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ ತಾತ-ಮುತ್ತಾತರ ಕಾಲದಿಂದ ಸಾರ್ವಜನಿಕ ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದ ಜಾಗವನ್ನು ಖಾಸಗಿ ವ್ಯಕ್ತಿಗಳು ತಮ್ಮ ಆಸ್ತಿ ಎಂದು ಹೇಳಿಕೊಂಡು ಅಕ್ರಮವಾಗಿ ಪರಭಾರೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹಂಪಾಪುರ ಹೋಬಳಿಯ ವಡ್ಡರಪಾಳ್ಯ ಗ್ರಾಮಸ್ಥರು ಬುಧವಾರ ಸ್ಮಶಾನ ಜಾಗದಲ್ಲೇ ಪ್ರತಿಭಟಿಸಿ ಜಿಲ್ಲಾಡಳಿತದ ಗಮನ ಸೆಳೆದರು.ಗ್ರಾಮದ ಮುಖಂಡ ಈರತ ಭೋವಿ ಮಾತನಾಡಿ, ಕರಿಗಾಳ ಗ್ರಾಮದ ಸರ್ವೇ ಸಂಖ್ಯೆ 301ರಲ್ಲಿ ಇರುವ ಸುಮಾರು 1.31 ಎಕರೆ ಜಾಗವನ್ನು ಹಲವು ದಶಕಗಳಿಂದ ವಡ್ಡರಪಾಳ್ಯ ಗ್ರಾಮಸ್ಥರು ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಗ್ರಾಮದಲ್ಲಿ ಯಾರೇ ಮೃತಪಟ್ಟರೂ ಅಂತ್ಯ ಸಂಸ್ಕಾರ ಇದೇ ಜಾಗದಲ್ಲಿ ನಡೆಯುತ್ತಿತ್ತು.ಆದರೆ ಈಗ ಈ ಜಾಗ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.ಸ್ಮಶಾನ ಜಾಗ ಕಳೆದುಕೊಂಡರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಮೃತರ ಅಂತ್ಯಸಂಸ್ಕಾರಕ್ಕೆ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದರು.ಗ್ರಾಮದ ಯಜಮಾನ ಶ್ರೀನಿವಾಸ ಮಾತನಾಡಿ, ಸಾರ್ವಜನಿಕ ಬಳಕೆಯಲ್ಲಿದ್ದ ಕರಾಬು ಜಮೀನನ್ನು ಖಾಸಗಿ ಹೆಸರಿಗೆ ದಾಖಲಿಸಿ ಪತ್ರ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ವಡ್ಡರಪಾಳ್ಯದಲ್ಲಿ ಬಹುತೇಕ ಭೋವಿ ಸಮುದಾಯದ ಜನರೇ ವಾಸಿಸುತ್ತಿದ್ದು, ಗ್ರಾಮಕ್ಕೆ ಇದ್ದ ಏಕೈಕ ಸ್ಮಶಾನವೂ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅನ್ಯಾಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಮಶಾನ ಜಾಗವನ್ನು ಗ್ರಾಮಸ್ಥರಿಗೆ ಮರುಹಸ್ತಾಂತರಿಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಭೋವಿ ಸಮಾಜದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡ ಸೀತಾರಾಂ, ಗ್ರಾಮದ ಮುಖಂಡರಾದ ಸಿದ್ದರಾಜು, ರಾಜಣ್ಣ, ಮಲ್ಲಭೋವಿ, ಶ್ರೀನಿವಾಸ, ರಾಮಸ್ವಾಮಿ, ಸಿದ್ದರಾಮಭೋವಿ, ರಾಮಚಂದ್ರ, ಸ್ವಾಮಿ, ಪರಮೇಶ್, ಮಂಜು, ರಾಮಾಭೋವಿ, ನಾಗರಾಜು, ಕೆಂಚಪ್ಪ, ಬಸವರಾಜು, ಮಲ್ಲಾಭೋವಿ, ಬಾಬು, ಹನುಮಂತ, ಗೋಪಾಲ, ರಮೇಶ, ಮಹಾದೇವ, ಆನಂದ, ರಾಜಣ್ಣ, ಕಾಂತರಾಜು, ವೆಂಕಟರಮಣ, ನರಿಯಭೋವಿ, ಹನುಮಭೋವಿ, ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರ ಬರ: ಪರಿಹಾರ ಕ್ರಮಕ್ಕೆ ಸಚಿವ ಬಿ.ಎಸ್.ಸುರೇಶ ಸೂಚನೆ
ದಾಂಪತ್ಯದಲ್ಲಿ ವಿಶ್ವಾಸ ವಿಟ್ಟಲ್ಲಿ ಆನಂದ ಪ್ರಾಪ್ತಿ