ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಕವಿತಾ ಅವರು ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ ಮಾರ್ಗವಾಗಿ ಸತ್ತಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣಗೊಳಿಸಿ, ಏಕಮುಖ ಸಂಚಾರ ವ್ಯವಸ್ಥೆ ಮಾಡಿದರೆ, ಅಪಘಾತಗಳನ್ನು ತಡೆಯಬಹುದು ಹಾಗೂ ಹೆದ್ದಾರಿ ಬದಿಯಲ್ಲಿರುವ ಗ್ರಾಮಗಳ ಜನರು ಸಹ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಟ್ಟುಗೂಳಿಪುರ, ಚೆಕ್‌ಪೋಸ್ಟ್, ಸಿದ್ದಯ್ಯನಪುರ, ಚಿಕ್ಕಹೊಳೆ ಗ್ರಾಮಸ್ಥರು ಒತ್ತಾಯಿಸಿದರು. ತಾಲೂಕಿನ ಅಟ್ಟುಗುಳಿಪುರದ ಮಾರಮ್ಮ ದೇವಸ್ಥಾನದಲ್ಲಿ ಎಸ್ಪಿ ಡಾ.ಬಿ.ಕವಿತಾ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ವೆಂಕಟಲಕ್ಷ್ಮಿ, ಪ್ರಾದೇಶಿಕ ಆಯುಕ್ತೆ ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸಭೆ ನಡೆಯಿತು. ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಅಟ್ಟುಗುಳಿಪುರ ಬಳಿ ೨೪ ಗಂಟೆಯಲ್ಲಿಯೇ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರು. ಇದನ್ನರಿತ ಮೂರು ಇಲಾಖೆಗಳ ಮುಖ್ಯ ಅಧಿಕಾರಿಗಳು ಇಂದು ಗ್ರಾಮದಲ್ಲಿ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಅಪಘಾತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಮಾತನಾಡಿ, ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿದೆ. ಹೆದ್ದಾರಿ ಪ್ರಾಧಿಕಾರ ವೈಜ್ಞಾನಿಕವಾಗಿ ರಸ್ತೆಯನ್ನು ನಿರ್ಮಾಣ ಮಾಡಿಲ್ಲ. ರಸ್ತೆ ಅಗಲೀಕರಣದ ನೆಪದಲ್ಲಿ ಅಕ್ಕಪಕ್ಕದ ಗ್ರಾಮಸ್ಥರ ಜಾಗವನ್ನು ತೆರವು ಮಾಡಿದ್ದಾರೆ. ಯಾವುದೇ ರೀತಿಯ ಪರಿಹಾರವನ್ನು ನಿವಾಸಿಗಳಿಗೆ ನೀಡಿಲ್ಲ. ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿಲ್ಲ. ಹೆದ್ದಾರಿಗೂ ಅವರ ಮನೆಗೂ ಐದು ಅಡಿಗಳ ಅಳ ಇದ್ದು, ವೃದ್ದರು, ಮಕ್ಕಳು ಮನೆಗೆ ಹೋಗಲು ತೊಂದರೆ ಪಡುತ್ತಿದ್ದಾರೆ. ಇನ್ನು ಗುಣಮಟ್ಟದಿಂದ ರಸ್ತೆ ನಿರ್ಮಾಣ ಮಾಡಿಲ್ಲ. ಅಲ್ಲಲ್ಲಿ ಹಳ್ಳಕೊಳ್ಳಗಳಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸುಗಮ ರಸ್ತೆ ಸಂಚಾರಕ್ಕೆ ಅಗತ್ಯವಾದ ರಸ್ತೆ ದುಬ್ಬು, ಸಿಗ್ನಲ್, ಸಿಸಿ. ಕ್ಯಾಮರ್, ಲೈಟ್‌ಗಳು, ಹಾಗೂ ತಿರುವುಗಳಲ್ಲಿ ಸವಾರರಿಗೆ ಜಾಗೃತಿ ಮೂಡಿಸುವ ನಾಮಫಲಕ ಅಳವಡಿಸಿಲ್ಲ . ಹೀಗಾಗಿ ಅಪಘಾತಗಳು ನಡೆಯುತ್ತಿದೆ. ಇದನ್ನು ತಪ್ಪಿಸಲು ಮೂರು ಇಲಾಖೆಯ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕು. ವೀಲಿಂಗ್ ಮಾಡುವವರ ವಿರುದ್ದ ಕ್ರಮ ವಹಿಸಿ, ಅಮೂಲ್ಯವಾದ ಜೀವವನ್ನು ಉಳಿಸಿ ಎಂದು ಮನವಿ ಮಾಡಿಕೊಂಡರು. ಹೆದ್ದಾರಿ ಅಕ್ಕಪಕ್ಕದಲ್ಲಿರುವ ಗ್ರಾಮದ ಮುಖಂಡರಾದ ಎಪಿಎಂಸಿ ಮಾಜಿ ನಿರ್ದೇಶಕ ಬಿ. ಶಿವಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಚನ್ನಂಜಪ್ಪ, ಗೌಡರ ಪರ್ವತಮ್ಮ, ಪುಟ್ಟಪ್ಪ, ಖಾವಿ ಬಸವರಾಜು, ಎಂಕೆಪಿ ಮಹೇಶ್‌ಕುಮಾರ್, ಸಿದ್ದಯ್ಯನಪುರ ಗೋವಿಂದರಾಜು, ಸಿದ್ದರಾಜು, ಮೂಡ್ಲುಪುರ ಸತೀಶ್ ಅನೇಕರು ಮಾತನಾಡಿ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಏಕಮುಖ ಸಂಚಾರಕ್ಕೆ ಎಸ್ಪಿ ಸೂಚನೆ :
ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳನ್ನು ತಪ್ಪಿಸಲು ಈಗಾಗಲೇ ನಮ್ಮ ಇಲಾಖೆಯಿಂದ ಸರ್ವೆ ಮಾಡಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದವರು ರಸ್ತೆ ನಿರ್ಮಾಣ ಮಾಡಿದ್ದಾರೆ. ಇನ್ನು ಏಕಮುಖ ಸಂಚಾರನ್ನಾಗಿ ಮಾಡಬೇಕು. ರಸ್ತೆ ಇನ್ನು ಸಹ ಅಗಲೀಕರಣಗೊಳ್ಳಬೇಕಾಗಿದೆ. ಚಾಮರಾಜನಗರದಿಂದ ಆರಂಭಗೊಂಡು ಅಟ್ಟುಗೂಳಿಪು ಟೋಲ್‌ಗೇಟ್‌ವರೆಗೆ ಏಕಮುಖ ಸಂಚಾರ ಮಾಡಲಾಗುವುದು. ಜೊತೆಗೆ ಹೆದ್ದಾರಿಯ ಬದಿಯ ಬರುವ ಗ್ರಾಮಗಳಲ್ಲಿ ಸಿಸಿ ಕ್ಯಾಮಾರ್, ಪೋಕಾಸ್ ಲೈಟ್ ಅಳವಡಿಸಿ, ಹಾಗೂ ಸಿಗ್ನಲ್‌ಗಳನ್ನು ಅಳವಡಿಸಲು ಸೂಚನೆ ನೀಡಿದ್ದೇವೆ ಎಂದರು. ಸಭೆಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್, ಟ್ರಾಫಿಕ್ ಇನ್ಸ್‌ಪೆಕ್ಟರ್ ರವಿಕುಮಾರ್, ಹೆದ್ದಾರಿ ಗುತ್ತಿಗೆದಾರರಾದ ಅಜಯ್, ಗುರುದಯಾಳ್, ಮುಖಂಡರಾದ ನಂಜುಂಡಸ್ವಾಮಿ, ಸತೀಶ್, ಮೂರ್ತಿ, ಮಂಜು, ನಾಗೇಂದ್ರ, ಚನ್ನರಾಜು, ಎ.ಎಂ. ಮಹದೇವಪ್ಪ, ಗಿರಿ, ತಮಿಳು ಸಂಘದ ಎನ್. ಸುಂದರ್, ತಂಗವೇಲು, ರಾಮಕೃಷ್ಣ, ಶ್ರೀಕಂಠು, ಮಂಜು, ಮಹೇಶ್, ಸೇರಿದಂತೆ ಅಕ್ಕಪಕ್ಕದ ಗ್ರಾಮದ ಸಂಘ ಸಂಸ್ಥೆಯ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.