ಜೆಡಿಎಸ್‌ ಸಕಲೇಶಪುರ ಕ್ಷೇತ್ರ ಕಳೆದುಕೊಳ್ಳಲು ನಾನೇ ಕಾರಣ

KannadaprabhaNewsNetwork | Published : Sep 19, 2024 1:46 AM

ಸಾರಾಂಶ

ಹಾಸನ ವಿಧಾನಸಭಾ ಕ್ಷೇತ್ರದ ಗೆಲುವಿಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶಪುರ ಕ್ಷೇತ್ರದಲ್ಲಿ ಸೋಲು ಅನುಭವಿಸುವಂತಾಯಿತು. ಇದರಲ್ಲಿ ನನ್ನ ತಪ್ಪಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಕಾರ್ಯಕರ್ತರಿಗೆ ತಿಳಿಸಿದರು. ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಪ್ರಜ್ವಲ್ ರೇವಣ್ಣ ಗೆಲ್ಲಬೇಕಿತ್ತು, ಆದರೆ ಕೆಲವರ ಕುತಂತ್ರದಿಂದ ಸೋಲು ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ. ದೇವೇಗೌಡರ ಕುಟುಂಬ ಇಂತಹ ನೂರಾರು ತನಿಖೆ ಎದುರಿಸಿ ಗೆದ್ದಿದ್ದೀವಿ. ಮುಂಬರುವ ಜಿಲ್ಲಾ ಹಾಗೂ ಪಂಚಾಯಿತಿ ಚುನಾವಣೆಯನ್ನು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಹೆಚ್ಚು ಜವಾಬ್ದಾರಿ ನೀಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಪ್ರತಿಷ್ಠಿತ ಕ್ಷೇತ್ರವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಗೆಲುವಿಗೆ ಹೆಚ್ಚು ತಲೆಕೆಡಿಸಿಕೊಂಡಿದ್ದರಿಂದ ಸಕಲೇಶಪುರ ಕ್ಷೇತ್ರದಲ್ಲಿ ಸೋಲು ಅನುಭವಿಸುವಂತಾಯಿತು. ಇದರಲ್ಲಿ ನನ್ನ ತಪ್ಪಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಕಾರ್ಯಕರ್ತರಿಗೆ ತಿಳಿಸಿದರು.

ತಾಲೂಕಿನ ಪಾಳ್ಯ ಗ್ರಾಮದ ಕೆ.ಎಸ್. ಮಂಜೇಗೌಡರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ನೀಡಿದ್ದರೂ ಮತದಾರರಿಂದ ತಿರಸ್ಕೃತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಿಂದ ಪ್ರಜ್ವಲ್ ರೇವಣ್ಣ ಗೆಲ್ಲಬೇಕಿತ್ತು, ಆದರೆ ಕೆಲವರ ಕುತಂತ್ರದಿಂದ ಸೋಲು ಅನುಭವಿಸಬೇಕಾಯಿತು. ಮುಂದಿನ ದಿನಗಳಲ್ಲಿ ಬಡ್ಡಿ ಸಮೇತ ತೀರಿಸುವ ಕಾಲ ಹತ್ತಿರದಲ್ಲಿದೆ. ದೇವೇಗೌಡರ ಕುಟುಂಬ ಇಂತಹ ನೂರಾರು ತನಿಖೆ ಎದುರಿಸಿ ಗೆದ್ದಿದ್ದೀವಿ. ಮುಂಬರುವ ಜಿಲ್ಲಾ ಹಾಗೂ ಪಂಚಾಯಿತಿ ಚುನಾವಣೆಯನ್ನು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಹೆಚ್ಚು ಜವಾಬ್ದಾರಿ ನೀಡಲಾಗುವುದು, ಮಂಜಣ್ಣ ಎಲ್ಲಾ ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮನೆಯಲ್ಲಿ ಕೂರದೇ ಪಕ್ಷದ ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸ್ಪಂದಿಸಲಾಗುವುದು. ನಮ್ಮಲ್ಲಿ ಶಾಸಕ, ಸಂಸದರು ಇಲ್ಲ ಎನ್ನುವ ಭಯಪಡುವ ಅವಶ್ಯಕತೆ ಇಲ್ಲ, ನಿಮ್ಮ ಜೊತೆ ನಾವಿದ್ದೇವೆ ಎಲ್ಲಾ ವರ್ಗದವರಿಗೆ ಸಮಾನವಾಗಿ ಪಕ್ಷದಲ್ಲಿ ಕಾಣಲಾಗುತ್ತಿದೆ ಎಂದು ಕೆಲವೊಂದು ಉದಾಹರಣೆಯನ್ನು ನೀಡಿದರು. ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.

ದೇವೇಗೌಡರು ನಂಬಿದ ಕೆಲವು ಮುಖಂಡರು ಬೆನ್ನಿಗೆ ಚಾಕು ಹಾಕಿದ್ದಾರೆ. ಅದರಲ್ಲಿ ಸಣ್ಣದೊಂದು ಚುನಾವಣೆ ಎದುರಿಸದ ಎಚ್. ಕೆ. ಜವರೇಗೌಡ ಅವರನ್ನು ರಾಜ್ಯಸಭೆ ಸದಸ್ಯರಾಗಿ ಮಾಡಲಾಗಿತ್ತು, ಅವರು ಏನು ಮಾಡಿದರು, ಈಗ ಎಲ್ಲಿದ್ದಾರೆ ಎಂದು ನಿಮಗೆ ಗೊತ್ತಿದೆ. 15-20 ವರ್ಷಗಳಿಂದ ನಿನ್ನೆ, ಮೊನ್ನೆವರೆಗೂ ನಮ್ಮ ಜೊತೆ ಇದ್ದು ಈಗ ಬೇರೆ ಪಕ್ಷ ಸೇರಿ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ, ಮುಂದಿನ ಮೂರು ವರ್ಷ ಕಳೆಯಲಿ ಅವರು ಯಾವ ಸ್ಥಿತಿಗೆ ಕಳುಹಿಸುತ್ತೇನೆಂದು ನೀವೇ ನೋಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮಿತ್ರ ಪಕ್ಷದ ಮಾಜಿ ಶಾಸಕರು ಒಬ್ಬರು ಕಾಂಗ್ರೆಸ್ ಪಕ್ಷದ ಸಂಸದರ ಜೊತೆ ಡ್ಯಾನ್ಸ್ ಮಾಡಿದ್ದಾರೆ ಎಂದು ನಿಮಗೆ ಗೊತ್ತಿದೆ, ಮುಂದಿನ ದಿನಗಳಲ್ಲಿ ಅವರ ಪಾಡು ಏನಾಗುತ್ತದೆ ಎಂದು ಕಾದು ನೋಡಿ ಮಾರ್ಮಿಕವಾಗಿ ನುಡಿದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕಾರ್ಯಕರ್ತರೆ ಪಕ್ಷದ ಬುನಾದಿ ಹಾಗಾಗಿ ಹೆಚ್ಚು ಹೊಸ ಹೊಸ ಕಾರ್ಯಕರ್ತರಿಗೆ ಸದಸ್ಯತ್ವ ನೀಡಬೇಕಾಗಿದೆ. ರಾಜಕೀಯದಲ್ಲಿ ಸೋಲು-ಗೆಲವು ಇದ್ದದ್ದೇ, ಅದಕ್ಕೆಲ್ಲ ಅಂಜಿ ಮನೆಯಲ್ಲಿ ಕೂರಕಾಗುತ್ತಾ, ನಿಮ್ಮ ಜೊತೆ ನಾವಿದ್ದೇವೆ. ೯೩ರ ಇಳಿವಯಸ್ಸಿನಲ್ಲಿ ದೇವೇಗೌಡ ಅವರು ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಕುಮಾರಣ್ಣ ಆರೋಗ್ಯ ಇಲ್ಲದ್ದಿದ್ದಾಗಲೂ ಚಿಕೆತ್ಸೆ ಪಡೆದು ಒಂದೇ ದಿನದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕೆ. ಎಸ್. ಮಂಜೇಗೌಡ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು, ಕುಮಾರಣ್ಣ, ರೇವಣ್ಣ, ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಸೋಲಿಗೆ ಕೈಕಟ್ಟಿ ಕುಳಿತುಕೊಳ್ಳಬಾರದು. ಪಕ್ಷದ ಪ್ರತಿಯೊಬ್ಬ ನಾಯಕರು ಹೊಸಬರನ್ನು ಗುರುತಿಸಿ ಸದಸ್ಯತ್ವ ನೀಡುವ ಮೂಲಕ ಪಕ್ಷದ ಬೆಳವಣಿಗೆಗೆ ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಸದಸ್ಯತ್ವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ಕದಾಳು ರಾಜಪ್ಪ ಗೌಡ, ಪಕ್ಷದ ಮುಖಂಡರಾದ ಶಂಕರಾಚಾರ್, ನಟರಾಜ್ ನಾಕಲಗೂಡು, ಸಿ.ವಿ ಲಿಂಗರಾಜ್. ಅಜ್ಜೇಗೌಡ, ಪಿ.ಎಲ್. ನಿಂಗರಾಜ್, ಕವಳಿಕೆರೆ ಹಿರಣ್ಣಯ್ಯಗೌಡ ಮುಂತಾದವರು ಉಪಸ್ಥಿತರಿದ್ದರು.

Share this article