ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳ ಭ್ರಷ್ಟಾಚಾರ ತಡೆಗೆ ಆಗ್ರಹ

KannadaprabhaNewsNetwork | Published : Mar 25, 2025 12:49 AM

ಸಾರಾಂಶ

ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳಿಂದ ದೇವಸ್ಥಾನದ ಕೋಟ್ಯಂತರ ರು. ಲೂಟಿ ನಡೆಯುತ್ತಿದೆ ಎಂದು ಪ್ರವೀಣ ಯಾದವಾಡ ಆರೋಪಿಸಿದರು.

ಬ್ಯಾಡಗಿ: ಧಾರ್ಮಿಕ ದತ್ತಿ ಇಲಾಖೆಯಲ್ಲಿನ ದೇವಸ್ಥಾನಗಳ ನಿಧಿಗಳ ಲೂಟಿಯನ್ನು ತಡೆಯಲು ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಮಂದಿರ ಮಹಾಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪ್ರವೀಣ ಯಾದವಾಡ, ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳಿಂದ ದೇವಸ್ಥಾನದ ಕೋಟ್ಯಂತರ ರು. ಲೂಟಿ ನಡೆಯುತ್ತಿದೆ. ಇಷ್ಟೆಲ್ಲ ಭ್ರಷ್ಟಾಚಾರ, ಲೂಟಿ ನಡೆಯುತ್ತಿದ್ದರೂ ಇಲಾಖೆ ಸಚಿವರು ಕಣ್ಮುಚ್ಚಿ ಕುಳಿತಿರುವುದು ಖಂಡನೀಯ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಹಿಂದೂ ಮುಖಂಡ ಜಗದೀಶ ಶಿಂಧೆ ಮಾತನಾಡಿ, ದತ್ತಿ ಇಲಾಖೆಯಲ್ಲಿನ ಹಣವನ್ನು ಅಧಿಕಾರಿಗಳ ತಮ್ಮ ಸಂಬಂಧಿಕರ ಖಾತೆಗಳಿಗೆ ಜಮಾ ಮಾಡಿಸಿಕೊಂಡು ಲೂಟಿ ನಡೆಸಿದ್ದಾರೆ. ಇದಕ್ಕೆ ಸಾಕಷ್ಟು ಸಾಕ್ಷಿಗಳಿದ್ದು, ಇವುಗಳನ್ನು ಪರಿಗಣಿಸಿ ಅವರಿಂದ ಹಣವನ್ನು ವಾಪಸ್ ಭರಣ ಮಾಡಿಕೊಂಡು ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ದೇಶಕ್ಕಾಗಿ ಹುತಾತ್ಮರಾದವರ ಸ್ಮರಿಸಿ

ರಾಣಿಬೆನ್ನೂರು: ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ವಿರುದ್ಧ ಭಗತ್ ಸಿಂಗ್ ಹಾಗೂ ಅವರ ಸಂಗಾತಿಗಳು ನಡೆಸಿದ ಹೋರಾಟದ ರೀತಿಯ ಕಿಚ್ಚು ಪ್ರತಿಯೊಬ್ಬರ ಮನದಲ್ಲಿ ಮಿಡಿದಾಗ ಮಾತ್ರ ಸಾವಿರಾರು ಭಗತ್ ಸಿಂಗ್ ಮರು ಹುಟ್ಟುತ್ತಾರೆ ಎಂದು ಸಾಹಿತಿ ದೇವರಾಜ ಹುಣಸಿಕಟ್ಟಿ ತಿಳಿಸಿದರು.ನಗರದ ಪೋಸ್ಟ್ ಸರ್ಕಲ್‌ನಿಂದ ಬಸ್ ನಿಲ್ದಾಣವರೆಗೆ ತಾಲೂಕು ಎಸ್‌ಎಫ್‌ಐ ಸಮಿತಿಯ ವತಿಯಿಂದ ನಡೆದ ಹುತಾತ್ಮ ಜ್ಯೋತಿ ಯಾತ್ರೆ ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಇಂದು ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ಜೀವ ಬಲಿದಾನ ಮಾಡಿದ ಹುತಾತ್ಮರನ್ನು ವಿದ್ಯಾರ್ಥಿ ಯುವಜನರ ಸ್ಮರಿಸಲೇಬೇಕಾದ ದಿನವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳನ್ನು ರಚಿಸಿಕೊಂಡರೂ ಸರಿಯಾದ ಶಿಕ್ಷಣ, ಉದ್ಯೋಗ ಸಿಗುತ್ತಿಲ್ಲದಿರುವುದು ದುರಂತವಾಗಿದೆ ಎಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿದರು. ನ್ಯಾಯವಾದಿ ಮೃತ್ಯುಂಜಯ ಗುದಿಗೇರ, ಕಲಾವಿದ ಬಸವರಾಜ ಸಾವಕ್ಕನವರ, ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ, ಶ್ರೀಧರ್ ಸಿ., ಗುಡ್ಡಪ್ಪ ಮಡಿವಾಳರ, ಗೌತಮ ಸಾವಕ್ಕನವರ, ಬಸವರಾಜ ಕೊಣಸಾಲಿ, ಮಹೇಶ ಮರೋಳ, ಸುನೀಲಕುಮಾರ ಎಲ್., ಧನುಷ ದೊಡ್ಡಮನಿ, ನಾಗರಾಜ ಕುರಿ, ಅರುಣ ಎಸ್.ಜೆ. ಆಕಾಶ ಎ., ಭರತಗೌಡ ಪಾಟೀಲ, ವಿಜಯ ಕೆ. ಮತ್ತಿತರರು ಪಾಲ್ಗೊಂಡಿದ್ದರು.

Share this article