ಅಂಬೇಡ್ಕರ್ ಭವನಕ್ಕೆ ಸೂಕ್ತ ಭದ್ರತೆ ಕಲ್ಪಿಸಲು ಆಗ್ರಹ

KannadaprabhaNewsNetwork |  
Published : Sep 07, 2025, 01:00 AM IST
ಪೊಟೋ೬ಸಿಪಿಟಿ೨: ನಗರದ ಅಂಬೇಡ್ಕರ್ ಭವನದ ಮುಂದೆ ದಲಿತಪರ ಸಂಘಟನೆಗಳವರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಳ್ಳತನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸೂಕ್ತ ಭದ್ರತೆ ಕಲ್ಪಿಸಬೇಕು ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿತು.

ಚನ್ನಪಟ್ಟಣ: ನಗರದ ಅಂಬೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕಳ್ಳತನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಸೂಕ್ತ ಭದ್ರತೆ ಕಲ್ಪಿಸಬೇಕು ದಲಿತ ಸಂಘರ್ಷ ಸಮಿತಿ ಹಾಗೂ ದಲಿತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿತು.

ನಗರದ ಸಾತನೂರು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಮುಂಭಾಗ ಜಮಾಯಿಸಿದ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ವೆಂಕಟೇಶ್ ಮಾತನಾಡಿ, ನಗರದ ಸಾತನೂರು ವೃತ್ತದ ಬಳಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೨೦೦೬ರಲ್ಲಿ ಭೂಮಿಪೂಜೆ ನೆರವೇರಿಸಿದ್ದು, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಈ ಕಟ್ಟಡದಲ್ಲಿ ಮೊನ್ನೆ ೩೬ಕ್ಕೂ ಹೆಚ್ಚು ಫ್ಯಾನ್‌ಗಳು ಹಾಗೂ ಕಿಟಕಿಗೆ ಅಳವಡಿಸಿರುವ ಸ್ಲೈಡಿಂಗ್‌ಗಳನ್ನು ಕಳವು ಮಾಡಲಾಗಿದೆ. ಆದ್ದರಿಂದ ಭವನದ ಸುತ್ತ ಸಿಸಿ ಕ್ಯಾಮರಾ ಅಳವಡಿಸುವ ಜತೆಗೆ ಕಾವಲುಗಾರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ತಾಪಂ ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದು ಪುಂಡು ಪೋಕರಿಗಳ ತಾಣವಾಗಿದೆ. ಈ ಹಿಂದೆ ಸಹ ಭವನದಲ್ಲಿ ಕಳ್ಳತನವಾಗಿದ್ದು, ಇದರ ಕುರಿತು ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಅಂಬೇಡ್ಕರ್ ಭವನದ ಕುರಿತು ತಾಲೂಕು ಆಡಳಿತ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಸಿದರು.

ಚನ್ನಪಟ್ಟಣ ಪ್ರಾಧಿಕಾರದ ಮಾಜಿ ನಿರ್ದೇಶಕ ಚಕ್ಕಲೂರು ಚೌಡಯ್ಯ ಮಾತನಾಡಿ, ಇದು ತಾಲೂಕು ದಲಿತ ಸಮುದಾಯದ ಸ್ವಾಭಿಮಾನದ ಕಟ್ಟಡವಾಗಿದ್ದು ಈ ಕಟ್ಟಡದ ಕಾಮಗಾರಿ ಅಪೂರ್ಣಗೊಂಡಿರುವುದು ಬೇಸರದ ಸಂಗತಿ. ಹಾಡಹಗಲೇ ಇಲ್ಲಿರುವ ವಸ್ತುಗಳು ಕಳ್ಳತನವಾಗುತ್ತಿದ್ದು, ಅಂಬೇಡ್ಕರ್ ಭವನಕ್ಕೆ ಧಕ್ಕೆ ಉಂಟಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಎಸ್‌ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆಂಗಲ್ ಮೂರ್ತಿ, ತಾಲೂಕು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಕೂಡ್ಲೂರು ಸಿದ್ದರಾಮು, ಗ್ರಾಪಂ ಮಾಜಿ ಸದಸ್ಯ ಭರತ್ ನೀಲಕಂಠನಹಳ್ಳಿ, ನೀಲಸಂದ್ರ ಸಿದ್ದರಾಮು, ಕೃಷ್ಣಪ್ಪ, ಗುರುಸಿದ್ದಯ್ಯ, ಚಕ್ಕೆರೆ ಗಂಗಾ ಇತರರಿದ್ದರು.

ಪೊಟೋ೬ಸಿಪಿಟಿ೨:

ಚನ್ನಪಟ್ಟಣದ ಅಂಬೇಡ್ಕರ್‌ ಭವನದ ಸೂಕ್ತ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿ ಮುಂದೆ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

PREV

Recommended Stories

ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌
ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌ ₹3500, ಗೋಲ್ಡ್‌ಕಾರ್ಡ್ ₹6500