ಬಳ್ಳಾರಿ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

KannadaprabhaNewsNetwork |  
Published : Jul 01, 2025, 12:47 AM IST
ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹಣಾ ಅಭಿಯಾನದಲ್ಲಿ ಸಮಿತಿ ಸಂಚಾಲಕ ಸೋಮಶೇಖರಗೌಡ ಮಾತನಾಡಿದರು.  | Kannada Prabha

ಸಾರಾಂಶ

ಬಳ್ಳಾರಿ ನಾಗರಿಕರಿಗೆ ಅಗತ್ಯದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಸೋಮವಾರ ಸಹಿ ಸಂಗ್ರಹಣಾ ಅಭಿಯಾನ ಆರಂಭಿಸಲಾಯಿತು.

ನಾಗರಿಕ ಹೋರಾಟ ಸಮಿತಿಯಿಂದ ಸಹಿ ಸಂಗ್ರಹಣಾ ಅಭಿಯಾನ

ಜು. 27ರಂದು ಬೃಹತ್ ಸಮಾವೇಶ ಸಂಘಟಿಸಲು ನಿರ್ಧಾರಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ನಾಗರಿಕರಿಗೆ ಅಗತ್ಯದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯಿಂದ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಸೋಮವಾರ ಸಹಿ ಸಂಗ್ರಹಣಾ ಅಭಿಯಾನ ಆರಂಭಿಸಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಹೋರಾಟ ಸಮಿತಿಯ ಸಲಹೆಗಾರ ಮುರ್ತುಜಾಸಾಬ್ ಅವರು, ಕಳೆದ 2-3 ತಿಂಗಳುಗಳಿಂದ ಸಮರ್ಪಕ ನಾಗರಿಕ ಸೌಲಭ್ಯಗಳಿಗಾಗಿ ಆಗ್ರಹಿಸಿ ಸಂಬಂಧಪಟ್ಟವರಿಗೆ ಅನೇಕ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಪ್ರತಿಭಟನೆಗಳನ್ನು ಸಂಘಟಿಸಲಾಗಿದೆ. ಆದರೆ, ಮಹಾನಗರ ಪಾಲಿಕೆಯಿಂದ ಹಾಗೂ ಜಿಲ್ಲಾಡಳಿತದಿಂದ ಸರಿಯಾದ ಸ್ಪಂದನೆ ಇಲ್ಲ. ನಗರದ ಪರಿಸ್ಥಿತಿ ಗಮನಿಸಿದರೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಸರ್ಕಾರ ಮೂಲ ಸೌಕರ್ಯದ ಸಮಸ್ಯೆಗಳ ಪರಿಹಾರಕ್ಕೆ ಒಂದು ಹೆಜ್ಜೆಯೂ ಮುಂದಕ್ಕೆ ಹೋಗಿಲ್ಲ ಎನ್ನುವುದು ಮನದಟ್ಟಾಗುತ್ತದೆ. ಬದಲಿಗೆ ನಗರದ ಪರಿಸ್ಥಿತಿ ದಿನದಿನಕ್ಕೆ ಹದಗೆಡುತ್ತಿದ್ದು, ಈ ಹಿನ್ನೆಲೆಯಲ್ಲಿ ಜನತೆ ಬಲಿಷ್ಠ ಹೋರಾಟ ರೂಪಿಸಬೇಕಾಗಿದೆ. ಈ ಕಾರಣಕ್ಕಾಗಿಯೇ ಸಹಿ ಸಂಗ್ರಹಣಾ ಅಭಿಯಾನ ಕೈಗೊಳ್ಳಲಾಗಿದೆ. ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಸಂಚಾಲಕ ಸೋಮಶೇಖರ ಗೌಡ ಮಾತನಾಡಿ, ಬಳ್ಳಾರಿ ನಿವಾಸಿಗಳಿಗೆ ಪೂರೈಸುವ ಕುಡಿಯುವ ನೀರಲ್ಲಿ ಚರಂಡಿ ನೀರು ಮಿಶ್ರಣವಾಗದಂತೆ ತಡೆಯುವುದು, ರಿಂಗ್ ರಸ್ತೆ ನಿರ್ಮಿಸುವುದು, ಮೋತಿ ಬ್ರಿಡ್ಜ್ ಅಗಲೀಕರಣ, ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಪೌರಕಾಮಿಕರ ಸಂಖ್ಯೆಯನ್ನು ಹೆಚ್ಚಿಸುವುದು, ಸುಧಾಕ್ರಾಸ್ ಮೇಲ್ಸೇತುವೆ ಪೂರ್ಣಗೊಳಿಸುವುದು ತುರ್ತು ಅಗತ್ಯವಿದೆ. ಆದರೆ, ಈ ಬಗ್ಗೆ ಯಾವುದೇ ಪೂರಕ ಕ್ರಮಗಳಾಗುತ್ತಿಲ್ಲ. ಬದಲಿಗೆ ಅವೈಜ್ಞಾನಿಕ, ಅನಾವಶ್ಯಕ ಕಾಮಗಾರಿಗಳಲ್ಲಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಜನರ ಆದ್ಯತೆ ಕೈಬಿಟ್ಟು, ಇರುವ ರಸ್ತೆ ಹಾಗೂ ಫುಟ್‌ಪಾತ್‌ನ್ನು ಅಗೆದು ಇನ್ನೊಂದು ರಸ್ತೆ ಹಾಗೂ ಫುಟ್‌ಪಾತ್ ನಿರ್ಮಿಸುವುದು, ಇರುವ ಸರ್ಕಲ್‌ಗಳನ್ನು ಕಿತ್ತುಹಾಕಿ ಅವೈಜ್ಞಾನಿಕ ಸರ್ಕಲ್‌ಗಳನ್ನು ನಿರ್ಮಿಸುವುದು, ಇವೇ ಬಳ್ಳಾರಿಯಲ್ಲಿ ‘ಅಭಿವೃದ್ಧಿ’ ಕೆಲಸವಾಗಿಬಿಟ್ಟಿವೆ. ಈ ಹಿನ್ನೆಲೆಯಲ್ಲಿ ನಾಗರಿಕರ ಹೋರಾಟ ತೀವ್ರಗೊಳಿಸುವ ಉದ್ದೇಶದಿಂದ 1 ಲಕ್ಷ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜು. 27ರಂದು ಬಳ್ಳಾರಿಯ ಗಾಂಧಿಭವನದಲ್ಲಿ ಬೃಹತ್ ಸಮಾವೇಶ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಹಿ ಸಂಗ್ರಹಣಾ ಅಭಿಯಾನದಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ಡಾ. ಪ್ರಮೋದ್, ಶಾಂತಾ, ನಾಗರತ್ನಾ, ಗೋವಿಂದ, ಈಶ್ವರಿ, ರಾಜಾ, ಪಂಪಾಪತಿ ಮತ್ತಿತರರಿದ್ದರು.

ವಿದ್ಯಾರ್ಥಿಗಳು, ರೈತರು, ಮಹಿಳೆಯರು, ಆಟೋ ಚಾಲಕರು, ಹಮಾಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಸಹಿ ಸಂಗ್ರಹಣಾ ಅಭಿಯಾನದಲ್ಲಿ ಭಾಗಿಯಾಗುವ ಮೂಲಕ ಹೋರಾಟ ಸಮಿತಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಬೆಂಬಲ ಸೂಚಿಸಿದರು.

PREV

Recommended Stories

ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ: ಇಂದು ಮತ್ತೆ ಉತ್ಖನನ?