ಗಜೇಂದ್ರಗಡ: ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರಿಗೆ ಹರಿಯಾಣ ಮಾದರಿಯಂತೆ ಸೇವಾ ಭದ್ರತೆ ನೀಡಲು ಒತ್ತಾಯಿಸಿ ಎಂಎಲ್‌ಸಿ ಎಸ್.ವಿ. ಸಂಕನೂರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಯಶವಂತ ಆರೇರ, ಅತಿಥಿ ಉಪನ್ಯಾಸಕರಿಗೆ ಕೆಲಸವೇ ಆಧಾರವಾಗಿದೆ. ಬಹಳಷ್ಟು ಜನರ ವಯೋಮಿತಿ ಮೀರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರವು ಹರಿಯಾಣ ಮಾದರಿಯಲ್ಲಿ ಸೇವಾ ಭದ್ರತೆ ಕಲ್ಪಿಸಬೇಕು. ಮಾನವೀಯ ನೆಲೆಯಲ್ಲಿ ನೆರವಾಗಬೇಕು. ಸದ್ಯ 941 ಪಾಲಿಟೆಕ್ನಿಕ್ ಕಾಯಂ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ. ಸುಧಾಕರ, ಅತಿಥಿ ಉಪನ್ಯಾಸಕರನ್ನು ನಮ್ಮ ಸರ್ಕಾರ ಕೈಬಿಡುವುದಿಲ್ಲ. ಅನ್ಯಾಯವನ್ನೂ ಮಾಡುವುದಿಲ್ಲ. ಕಾದು ನೋಡಿ ಎಂದು ಹೇಳಿದರು.ಎಂಎಲ್‌ಸಿ ಎಸ್.ವಿ. ಸಂಕನೂರ ಮಾತನಾಡಿ, ಅತಿಥಿ ಉಪನ್ಯಾಸಕರಿಗೆ ಸರ್ಕಾರವು ಸೇವಾ ಭದ್ರತೆ ಕೊಡಬೇಕೆಂದು ಸಚಿವ ಡಾ.ಎಂ.ಸಿ. ಸುಧಾಕರ ಅವರ ಮನವೊಲಿಸಲು ಯತ್ನಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣಕುಮಾರ ಬೇವಿನಕಟ್ಟಿ, ವಿನೋದ ಗೊಂದನವಾಡಿ, ಶುಭಂ, ಶ್ರೀಧರ ದಿವಾನದ, ರಾಕೇಶ ಕಡಬಿನ, ಅರುಣಕುಮಾರ, ವಿನೋದ ಮರಿನಾಯ್ಕರ್ ಸೇರಿದಂತೆ 500ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.