ಲಕ್ಷ್ಮೇಶ್ವರ: ಪಟ್ಟಣದಲ್ಲಿ ಸಮಗಾರ ಸಮಾಜದ ನಿವೇಶನರಹಿತರಿಗೆ ಆಶ್ರಯ ನಿವೇಶನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಜಾಗ ನೀಡುವಂತೆ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಸಂಘದ ಜಿಲ್ಲಾಧ್ಯಕ್ಷ ಅನಿಲ ಮುಳಗುಂದ ಅವರ ನೇತೃತ್ವದಲ್ಲಿ ಸಮಾಜದವರು ಬುಧವಾರ ಶಾಸಕರು, ತಹಸೀಲ್ದಾರರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಅನಿಲ ಮುಳಗುಂದ ಮಾತನಾಡಿ, ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮಗಾರ ಸಮಾಜದವರು ಸಣ್ಣಪುಟ್ಟ ವ್ಯಾಪಾರ-ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅನೇಕರಿಗೆ ಸ್ವಂತ ಮನೆಯಿಲ್ಲದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಂಥವರಿಗೆ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಬೇಕು ಹಾಗೂ ಸಮಾಜದ ಜನರ ಕಾರ್ಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೂ ಜಾಗ ನೀಡಬೇಕು ಎಂದು ಕೋರಿದರು.ಮನವಿ ಪತ್ರ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರು, ಸಮಾಜದ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಗ್ರೇಡ್-೨ ತಹಸೀಲ್ದಾರ ಮಂಜುನಾಥ ಅಮಾಸಿ, ಮುಖ್ಯಾಧಿಕಾರಿ ಮಾಂತೇಶ ಬೀಳಗಿ ಮನವಿ ಸ್ವೀಕರಿಸಿದರು. ಈ ವೇಳೆ ಕಲ್ಯಾಣ ವಿವಿಧೋದ್ದೇಶ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಲಕ್ಷ್ಮೀಬಾಯಿ ಟಾಕಪ್ಪ ಸಾತಪುತೆ, ಕಾರ್ಯದರ್ಶಿ ಲತಾ ಎಸ್. ಹಂಜಗಿ, ಟಾಕಪ್ಪ ಸಾತ್ಪುತೆ, ಮಂಜುನಾಥ ಹಂಜಗಿ, ಪರಶುರಾಮ ಸಾತಪುತೆ, ಅನುರಾಜ ಹಂಜಗಿ ಇದ್ದರು. 16ರಂದು ಅಂತಾರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ
ಲಕ್ಷ್ಮೇಶ್ವರ: ಪಟ್ಟಣದ ಬಾಲಾಜಿ ಆಸ್ಪತ್ರೆಯ ಸಭಾಭವನದಲ್ಲಿ ನ. ೧೬ರಂದು ಬೆಳಗ್ಗೆ ೧೦ಕ್ಕೆ ೮ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಆಯುಷ್ ಇಲಾಖೆ, ಆಯುಷ್ ಮಂತ್ರಾಲಯ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳು, ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದವೀಧರರ ಸಂಘದ ಆಶ್ರಯದಲ್ಲಿ ಪ್ರಕೃತಿ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸೆಯ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗುವುದು.ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸುವರು. ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯ ಡಾ. ಸತೀಶ ಹೊಂಬಾಳಿ, ವರ್ತಕ ಬಸವರಾಜ ಮಹಾಂತಶೆಟ್ಟರ, ಅಗಡಿ ಆಸ್ಪತೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯೆ ಡಾ.ಶೃತಿ ಹೂವಿನ್, ಡಾ. ಬಸವರಾಜ ಹಂಡಿ, ಡಾ. ಶೋಬಿತಾ ತಂತ್ರಿ, ಪ್ರಜ್ವಲ್ ಹಿರೇಮಠ, ಕಾವ್ಯಾ ಪೂಜಾರ, ಕೀರ್ತಿ ಕೆ. ಮುಂತಾದವರು ಆಗಮಿಸುವರು.