ಕನ್ನಡಪ್ರಭ ವಾರ್ತೆ ಇಂಡಿ: ನೇಗಿಲಯೋಗಿಗಳಾದ ಜೋಡೆತ್ತಿನ ಕೃಷಿಕರನ್ನು ಉಳಿಸಿ ಬೆಳೆಸಲು ರಾಜ್ಯದ ಶೇ.10 ರಷ್ಟು ಬಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು, ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11 ಸಾವಿರ ಪ್ರೋತ್ಸಾಹಧನ ನೀಡುವಂತೆ ನಂದಿ ಸೇನೆ ಮುಖಂಡರು ಹಕ್ಕೊತ್ತಾಯ ಮಂಡಿಸಿದರು.
ಕನ್ನಡಪ್ರಭ ವಾರ್ತೆ ಇಂಡಿ: ನೇಗಿಲಯೋಗಿಗಳಾದ ಜೋಡೆತ್ತಿನ ಕೃಷಿಕರನ್ನು ಉಳಿಸಿ ಬೆಳೆಸಲು ರಾಜ್ಯದ ಶೇ.10 ರಷ್ಟು ಬಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು, ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11 ಸಾವಿರ ಪ್ರೋತ್ಸಾಹಧನ ನೀಡುವಂತೆ ನಂದಿ ಸೇನೆ ಮುಖಂಡರು ಹಕ್ಕೊತ್ತಾಯ ಮಂಡಿಸಿದರು.
ತಾಲೂಕಿನ ಹೋರ್ತಿ ಬಳಿ ಸೋಲ್ಲಾಪೂರ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಮತ್ತು ಅಥರ್ಗಾ ಗ್ರಾಮದ ಬಳಿ ಅಕ್ಕಲಕೋಟ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ತಡೆದು ಜೋಡೆತ್ತಿನ ರೈತರ ಬೃಹತ್ ಹಕ್ಕೊತ್ತಾಯ ಮಾಡಿದರು.ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಿದರು. ಎತ್ತಿನ ನೇಗಿಲಿನಿಂದ ಉಳಿಮೆ ಮಾಡುವ ಮೂಲಕ ಪಂಚಮಹಾಭೂತಗಳನ್ನು ರಕ್ಷಣೆ ಮಾಡುತ್ತಾ ನಾಗರಿಕತೆಯ ವಿಕಾಸಕ್ಕೆ ಕಾರಣೀಭೂತರಾದ ಜೋಡೆತ್ತಿನ ಕೃಷಿಕರನ್ನು ನೇಗಿಲಯೋಗಿಗಳು ಎಂದು ಕರೆಯಲಾಗುತ್ತಿದೆ. ನಿಜವಾದ ನೇಗಿಲಯೋಗಿಗಳಾದ ಎತ್ತಿನ ಕೃಷಿಕರ ಕೊಡುಗೆಯನ್ನು ನಿರ್ಲಕ್ಷಿಸಿ ಜಾರಿಗೊಳಿಸುತ್ತಿರುವ ಯೋಜನೆಗಳಿಂದ ಸ್ವಾತಂತ್ರ್ಯಪೂರ್ವದಲ್ಲಿ ಶೇ.1.0ರಷ್ಟು ಇದ್ದ ಮಣ್ಣಿನ ಸರಾಸರಿ ಸಾವಯವ ಇಂಗಾಲದ ಪ್ರಮಾಣ ಇಂದು ಶೇ. 0.33ಕ್ಕೆ ಕುಸಿದಿದೆ. ಇದರಿಂದ ಪ್ರಕೃತಿ ವಿಕೋಪಗಳು ಹೆಚ್ಚಾಗಿ ರೈತರು ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಂದಿ ಕೃಷಿ ಸಂಸ್ಕೃತಿ ಪುನಶ್ವೇತನಕ್ಕಾಗಿ ರಾಜ್ಯದ ಶೇ. 10ರಷ್ಟು ಬಜೆಟ್ ಮೀಸಲಿಡುವ ಕಾನೂನು ಜಾರಿಗೆ ತಂದು, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತರಬೇಕು. ಇದರೊಂದಿಗೆ ನಂದಿ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಔಷಧಿ, ಗೊಬ್ಬರ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಶ್ರೀ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಜಾರಿಯಾಗಬೇಕು ಎಂಬುದು ರೈತರ ಸ್ಪಷ್ಟ ನಿಲುವಾಗಿದೆ. ಪ್ರತಿ ಜೋಡೆತ್ತಿನ ಕೃಷಿಕನಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹ ಧನ ಯೋಜನೆ ಜಾರಿ ಆಗಬೇಕು ಎಂಬುದು ತಮ್ಮ ನಿಲುವನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.ಶ್ರೀ ಮುರುಘರಾಜೇಂದ್ರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಅಥರ್ಗಾ ಗ್ರಾಪಂ ಮಾಜಿ ಅಧ್ಯಕ್ಷ ಗೀರಿಶ್ ಚಾಂದಕೋಟೆ, ಗಣಪತಿ ಬಾಣಿಕೋಲ, ರೇವಣಸಿದ್ದ ಅಂಕಲಿಗಿ, ಕುಲಪ್ಪ ಹಿಟ್ಟನ್ನಳ್ಳಿ, ಚಂದ್ರಾಮ ಗುಳಗಿ, ಗುರುಲಿಂಗಪ್ಪ ಬಿರಾದಾರ, ರಾವುತಪ್ಪ ತಡ್ಲಗಿ, ಬಸವರಾಜ ಬಗಲಿ, ಹಣಮಂತ ಶಿರಶ್ಯಾಡ, ಹಣಮಂತ ಗುಂಡಗರಜಿ, ಮಲ್ಲಪ ಲೋಣಿ, ಫೀರಪ್ಪ ಲಿಂಗದಹಳ್ಳಿ, ಹುಸನಪ್ಪ ಬಾಣಿಕೋಲ ಸೇರಿ ಅನೇಕ ರೈತರು ಉಪಸ್ಥಿತರಿದ್ದರು.
ಮುಂಜಾಗ್ರತಾ ಕ್ರಮವಾಗಿ ಇಂಡಿ ಪೋಲಿಸ್ ಠಾಣೆ ಸಿಪಿಐ ಸುನೀಲ ಪಾಟೀಲ ಮತ್ತು ಹೊರ್ತಿ ಠಾಣೆ ಪಿಎಸ್ಐ ಅನೀತಾ ರಾಠೋಡ ನೇತೃತ್ವದಲ್ಲಿ ಭದ್ರತೆ ನೀಡಲಾಗಿತ್ತು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.