371(ಜೆ) ಹೋರಾಟಕ್ಕೆ ಶಾಸಕ ಬೆಂಬಲ

KannadaprabhaNewsNetwork |  
Published : Oct 19, 2026, 03:15 AM IST
371 | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ದಾಖಲಾಗಿರುವ ವಿಜಯಪುರ ಜಿಲ್ಲೆಗೆ ಸಂವಿಧಾನದ 371(ಜೆ) ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಗರದ ಬಸವೇಶ್ವರ ವೃತ್ತದ ಬಳಿ ಕಳೆದ 16 ದಿನಗಳ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂಡಿ, ಸಿಂದಗಿ, ದೇವರ ಹಿಪ್ಪರಗಿ ಮತಕ್ಷೇತ್ರಗಳ ಶಾಸಕರು ಬೇಟಿ ನೀಡಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ದಾಖಲಾಗಿರುವ ವಿಜಯಪುರ ಜಿಲ್ಲೆಗೆ ಸಂವಿಧಾನದ 371(ಜೆ) ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಗರದ ಬಸವೇಶ್ವರ ವೃತ್ತದ ಬಳಿ ಕಳೆದ 16 ದಿನಗಳ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂಡಿ, ಸಿಂದಗಿ, ದೇವರ ಹಿಪ್ಪರಗಿ ಮತಕ್ಷೇತ್ರಗಳ ಶಾಸಕರು ಬೇಟಿ ನೀಡಿ ಬೆಂಬಲ ಸೂಚಿಸಿದರು.

ಈ ವೇಳೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳು ಅತೀ ಹಿಂದುಳಿದ ಪ್ರದೇಶಗಳೆಂದು ಡಾ.ನಂಜುಂಡಪ್ಪ ವರದಿಯಲ್ಲಿ 371(ಜೆ) ಸೇರುವ ಎಲ್ಲ ಅರ್ಹತೆಗಳಿವೆ ಎಂದು ಜಾರಿಯಾಗುವ ಸಂದರ್ಭದಲ್ಲಿ ಸದನದಲ್ಲಿ ಪ್ರಶ್ನೆ ಮಾಡಿದ್ದೇನೆ. ಅದನ್ನು ಯಾವ ಕಾರಣಕ್ಕೆ ಕೈಬಿಟ್ಟರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ರಾಜ್ಯದ ಎಲ್ಲ ಬಗೆಗಳಲ್ಲಿ ಅವಲೋಕನ ಮಾಡಿದರೂ ಸತತ ಬರಗಾಲ ಪಿಡೀತ ಪ್ರದೇಶವೆಂದು ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದೇವೆ. ಜಿಲ್ಲೆಯ ಎಲ್ಲ ಶಾಸಕರೊಳಗೊಂಡು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಕುರಿತು ಚರ್ಚಿಸುವಲ್ಲಿ ನಾ ಮೊದಲಿಗನಾಗುವೆ. ಕಲ್ಯಾಣ ಕರ್ನಾಟಕಕ್ಕೆ ನಾವು ಸಹಕಾರ ನೀಡಿದ್ದೇವೆ. ಅವರು ನಮಗೆ ಸಹಕಾರ ನೀಡಬೇಕು. ಮುಖ್ಯಮಂತ್ರಿಗಳಲ್ಲಿ ಹೋರಾಟ ಸಮಿತಿ ಸದಸ್ಯರೊಂದಿಗೆ ಭೇಟಿ ಮಾಡಿ ಈ ವಿಷಯದ ಕುರಿತು ಪ್ರಸ್ತಾವನೆ ಸಲ್ಲಿಸಿ ಕೇಂದ್ರಕ್ಕೆ ಶಿಫಾರಸಿಗಾಗಿ ನಾವೆಲ್ಲ ಶಾಸಕರು ಪ್ರಯತ್ನಸುತ್ತೇವೆ ಎಂದು ಭರವಸೆ ನೀಡಿದರು.

ಶಾಸಕ ಅಶೋಕ ಮನಗೂಳಿ ಮತನಾಡಿ, ಸಿಂದಗಿ, ಇಂಡಿ, ಮುದ್ದೆಬಿಹಾಳ, ಬಾಗೇವಾಡಿ ತಾಲೂಕುಗಳಲ್ಲಿ ಅನೇಕರು ನಿಜಾಮರ ಕಾಲದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಹಿನ್ನಲೆಯಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅತೀ ಹಿಂದುಳಿದ್ದೇವೆ. ಅದರಡಿ ಡಾ.ನಂಜುಂಡಪ್ಪ ವರದಿ 371 ಜೆ ಅನ್ವಯವಾಗುವ ಎಲ್ಲ ಅರ್ಹತೆಗಳು ನಮ್ಮಲ್ಲಿವೆ ಎಂದು ಹೇಳಿದರು.

ದೇ.ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ, ಇತ್ತ ಮುಂಬೈ ಕರ್ನಾಟಕದ ಕೊನೆಯ ತಾಲೂಕು ಅತ್ತ ಕಲ್ಯಾಣ ಕರ್ನಾಟಕದ ಕೊನೆಯ ಊರುಗಳ ಪ್ರಜೆಗಳಾದ ನಾವುಗಳು ಒದ್ದವರ ಚಂಡುಗಳಾಗಿ ಸೌಲಭ್ಯ ವಂಚಿತರಾಗಿದ್ದೇವೆ. ಅದಕ್ಕೆ ಈ ಭಾಗದ ಸರ್ವತೋಮುಖ ಅಭಿವೃದ್ಧಿ ಸೌಲಭ್ಯದ ವ್ಯಾಪ್ತಿಗೆ ಸೇರಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ. ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ವಹಿಸಿ, ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ಶರಣಪ್ಪ ಸುಣಗಾರ, ರಂಗನಾಥ ತೋರ್ಫೆ, ಶಂಬುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ, ಅಶೋಕ ಅಲ್ಲಾಪುರ ಮಾತನಾಡಿದರು. ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕೌಲಗಿ, ಶಿವು ಹತ್ತಿ, ಜೆಡಿಎಸ್ ಅಧ್ಯಕ್ಷ ಎಂ.ಎನ್.ಪಾಟೀಲ, ಶೈಲಜಾ ಸ್ಥಾವರಮಠ, ಪ್ರಕಾಶ ಹಿರೇಕುರಬರ, ಹೋರಾಟ ಸಮಿತಿಯ ಎಂ.ಎಂ.ಹಂಗರಗಿ, ಸಿದ್ದು ಪಾಟೀಲ, ಅಶೋಕ ವಾರದ, ಪಂಡಿತ ಯಂಪೂರೆ, ಗುರುರಾಜ ಪಡಶೆಟ್ಟಿ, ಸಿದ್ದ ಕಡಗಂಚಿ, ಆನಂದ ಶಾಬಾದಿ, ಸಂಗಣ್ಣ ಬ್ಯಾಕೋಡ, ಅಂಬರೀಶ ಸುಣಗಾರ, ಎಸ್.ಆರ್.ಪಾಟೀಲ, ಶಂಕರ ಮಲ್ಲೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.--

------

ಕೋಟ್‌

ಅಂದು ಕೇಳುವವರ ಕೊರತೆಯಿಂದ ಜಾರಿಯಾಗಲ್ಲಿಲ್ಲ. ಸದ್ಯ ಹೊರಾಟದ ಕಿಚ್ಚು ಪ್ರಾರಂಭವಾಗಿದೆ ಅದು ಜಾರಿಯಾಗುವರೆಗೂ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ಸಂಪೂರ್ಣ ಎಲ್ಲ ರೀತಿಯ ಬೆಂಬಲವಿದೆ. ಪ್ರತಿಯೊಂದು ಹೊಬಳಿ ಮಟ್ಟದವರೆಗೂ ಜನಾಂದೊಲನ ನಡೆಯಬೇಕು. ಅಂದಾಗ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವಿಜಯಪುರ ಜಿಲ್ಲೆಯನ್ನು 371(ಜೆ) ಕಲಂಗೆ ಸೇರಿಸಲು ಮನಸ್ಸು ಮಾಡಬೇಕು.

ಅಶೋಕ ಮನಗೂಳಿ, ಸಿಂದಗಿ ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ಬೆಳಕಿನಿಂದ ನಮ್ಮ ಬದುಕು ಪಾವನ: ರಂಭಾಪುರಿ ಜಗದ್ಗುರು
ಕಬ್ಬು ಬೆಳೆಗಾರರ ಹೋರಾಟಕ್ಕೆ ಜನಬೆಂಬಲದ ಮಹಾಪೂರ