ಕನ್ನಡಪ್ರಭ ವಾರ್ತೆ ರಾಯಚೂರು
ನಗರಸಭೆ ವ್ಯಾಪ್ತಿಯ ವಾರ್ಡ್ ನಂ:33 ರ ಯರಮರಸ್ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕನಿಷ್ಠ ಮೂಲಭೂತ ಸವಲತ್ತುಗಳಿಲ್ಲದೇ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಾಡಳಿತ ಅಗತ್ಯ ಸೌಲಭ್ಯ ಒದಗಿಸಿಕೊಡಲು ಮುಂದಾಗಬೇಕು ಎಂದು ಗ್ರಾಮದ ಮುಖಂಡ ಶಿವಕುಮಾರ ಪೊಲೀಸ್ ಪಾಟೀಲ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಲ್ಲಿಯೇ ಅತಿ ದೊಡ್ಡದಾದ ವಾರ್ಡ್‌ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ವಾಸವಿದ್ದು, ರಾಷ್ಟ್ರೀಯ ಹೆದ್ದಾರಿ, ರೈಲ್ವೆನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಯರಮರಸ್‌ನಲ್ಲಿ ಚರಂಡಿ, ರಸ್ತೆ, ಬೀದಿ ದೀಪ, ಶೌಚಾಲಯ ಸೇರಿ ಹಲವು ಸೌಲಭ್ಯಗಳು ಸಮರ್ಪಕವಾಗಿ ಕಲ್ಪಿಸಿಲ್ಲ ಆರೋಪಿಸಿದರು.
ಜಿಲ್ಲಾ ಹೆದ್ದಾರಿ, ರಾಜ್ಯ ಹೆದ್ದಾರಿಯಿಂದ ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿರುವ ಮುಖ್ಯ ರಸ್ತೆಯಿಂದಾಗಿ ವಾಹನಗಳ ದಟ್ಟಣೆ ಜಾಸ್ತಿಯಾಗಿ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಅಪಘಾತಗಳ ಪ್ರಮಾಣವು ಹೆಚ್ಚಾಗುತ್ತಿದ್ದು ಇದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ ಎಂದರು.ವಾರ್ಡ್‌ನಲ್ಲಿ ಒಳಚರಂಡಿ ಸಂಪೂರ್ಣ ಹದಗೆಟ್ಟಿದ್ದು, ಅಮೃತ ನಗರೋತ್ಥಾನ ಯೋಜನೆಯಡಿ ನೂರಾರು ಕೋಟಿ ವಿನಿಯೋಗಿಸಿದರೂ ಪ್ರಯೋಜನವಾಗಿಲ್ಲ. ಎಲ್ಲ ಬಡಾವಣೆಗಳಲ್ಲಿ ಚರಂಡಿ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ. ವಾರ್ಡ್ ಲ್ಲಿ 10 ಬೂತ್‌ಗಳಿದ್ದು, ಪ್ರತಿ ಬೂತ್‌ನಲ್ಲಿ ಕನಿಷ್ಠ ಸಾವಿರ ಜನಸಂಖ್ಯೆ ಇದೆ. ಆದರೆ ಸಾರ್ವಜನಿಕ ಶೌಚಾಲಯಗಳು ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ. ಅಗತ್ಯದಷ್ಟು ಶೌಚಾಲಯಗಳನ್ನು ನಿರ್ಮಿಸುವಲ್ಲಿ ಸರ್ಕಾರ ಕ್ರಮ ವಹಿಸಬೇಕು. ಇಷ್ಟು ಜನಸಂಖ್ಯೆನ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ತ್ಯಾಜ್ಯ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ. ಕಸದ ವಾಹನ 15 ದಿನಕ್ಕೊಮ್ಮೆ ಬರುತ್ತಿದ್ದು, ಕಂಡಲ್ಲಿ ಕಂಡಲ್ಲಿ ಕಸ ಸಂಗ್ರಹಗೊಳ್ಳುತ್ತಿದೆ. ಯರಮರಸ್ ದಂಡ್ ಗ್ರಾಮದಲ್ಲಿ ಏರ್‌ಪೋರ್ಟ್‌ಗಾಗಿ ಮನೆಗಳನ್ನು ತೆರವು ಮಾಡುತ್ತಿದ್ದು, ಅವರಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಜತೆಗೆ ನಿರಾಶ್ರಿತರಿಗೆ ಸೂರಿನ ವ್ಯವಸ್ಥೆ ಮಾಡಬೇಕು ಎಂದರು.ರಾಯಚೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರುತ್ತಿದ್ದು, ಈಗಲಾದರೂ 33ನೇ ವಾರ್ಡ್ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಇಲ್ಲವಾದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಸಿದ್ದಪ್ಪ ಪೂಜಾರಿ, ಮಲ್ಲಣ್ಣ ನಾಯಕ, ಹನುಮೇಶ, ಅಫ್ಸರ್ ಪಾಷಾ, ಮಹೇಶ ಕುಮಾರ್, ಹನುಮೇಶ ಯರಮರಸ್ ದಂಡ್ ಮತ್ತಿತರರು ಇದ್ದರು.