ದಾವಣಗೆರೆಯಲ್ಲಿ ಆ.15ರೊಳಗೆ ಒಳಮೀಸಲು ನೀಡಲು ಪಟ್ಟು

KannadaprabhaNewsNetwork |  
Published : Aug 12, 2025, 12:30 AM IST
11ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಮಾದಿಗ ಮಹಾಸಭಾ, ಡಿಎಸ್ಸೆಸ್ ಮುಖಂಡ ಟಿ.ರವಿಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವುದೇ ಕಿಡಿಗೇಡಿಗಳ ಭಯಕ್ಕೆ ಮಣಿಯದೇ ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗದ ವರದಿಯಂತೆ ಆ.15ರ ಒಳಗೆ ಒಳಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಿಎಂ ಅಣಕು ಶವಯಾತ್ರೆ, ಸಿಎಂ ನಿವಾಸಕ್ಕೆ ಮುತ್ತಿಗೆಯಂತಹ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಎಚ್ಚರಿಸಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಯಾವುದೇ ಕಿಡಿಗೇಡಿಗಳ ಭಯಕ್ಕೆ ಮಣಿಯದೇ ನ್ಯಾಯಮೂರ್ತಿ ನಾಗಮೋಹನ ದಾಸ್‌ ಆಯೋಗದ ವರದಿಯಂತೆ ಆ.15ರ ಒಳಗೆ ಒಳಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಿಎಂ ಅಣಕು ಶವಯಾತ್ರೆ, ಸಿಎಂ ನಿವಾಸಕ್ಕೆ ಮುತ್ತಿಗೆಯಂತಹ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಮಾದಿಗ ಮಹಾಸಭಾ, ದಲಿತ ಸಂಘರ್ಷ ಸಮಿತಿ ಎಚ್ಚರಿಸಿವೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಎಸ್ಸೆಸ್ ಮುಖಂಡ ಟಿ.ರವಿಕುಮಾರ, ಪಂಜು ಪೈಲ್ವಾನ್, ಸುಪ್ರೀಂ ಕೋರ್ಟ್ ಒಳ ಮೀಸಲಾತಿ ನೀಡುವುದು ಆಯಾ ರಾಜ್ಯ ಸರ್ಕಾರದ ಕೆಲಸವೆಂದು ತೀರ್ಪು ನೀಡಿ ಆ.1ಕ್ಕೆ ಒಂದು ವರ್ಷ ಕಳೆದಿದೆ. ಇನ್ನೂ ಸಹ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಇನ್ನಷ್ಟು ವಿಳಂಬವನ್ನು ಮಾದಿಗ ಸಮುದಾಯ ಸಹಿಸಲು ಸಾಧ್ಯವಿಲ್ಲ ಎಂದರು.

ಸಿದ್ದರಾಮಯ್ಯ ಎದೆಗಾರಿಕೆಯ ನಾಯಕತ್ವ ತೋರುವಲ್ಲಿ ವಿಫಲವಾಗಿದ್ದು, ಕಾಳೆಯುವವರಿಂದ ಹೊರ ಬಂದು ನ್ಯಾ.ನಾಗಮೋಹನ ದಾಸ್‌ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ಜಾರಿಗೊಳಿಸುವ ತೀರ್ಮಾನ ಘೋಷಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಮೇಲೆ ನಮ್ಮ ಸಮುದಾಯ ಇಟ್ಟಿದ್ದ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆದರೂ ಸರ್ಕಾರ ಸ್ಪಂದಿಸದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗ ಹಾಗೂ ಈಗ ನ್ಯಾ.ನಾಗಮೋಹನ ದಾಸ್ ಆಯೋಗ ಎಲ್ಲಾ ಮೂರೂ ಆಯೋಗಗಳು ರಾಜ್ಯದಲ್ಲಿ ಮಾದಿಗ ಮತ್ತು ಅದರ ಉಫ ಜಾತಿಗಳೇ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ದೊಡ್ಡ ಸಮೂಹವೆಂದು ಸ್ಪಷ್ಟವಾಗಿ ಹೇಳಿವೆ. ಈ ಎಲ್ಲಾ ಆಯೋಗಗಳು ಮಾದಿಗ ಉಪ ಜಾತಿಗಳ ಗುಂಪಿಗೆ ಶೇ.6 ಮೀಸಲಾತಿ ನಿಗದಿಪಡಿಸಿವೆ. ಹಾಗಾಗಿ ಮಾದಿಗರ ಪಾಲಿನ ಶೇ.6 ಮೀಸಲಾತಿ ಪ್ರತ್ಯೇಕಿಸಿ, ಘೋಷಿಸಲಿ ಎಂದರು.

ರಾಜ್ಯ ಸರ್ಕಾರವು ಮಾದಿಗರಿಗೆ ಪ್ರತ್ಯೇಕ ಶೇ.6 ಮೀಸಲಾತಿಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಘೋಷಣೆ ಮಾಡಬೇಕು. ಇಲ್ಲವಾದರೆ ಮತ್ತೆ ಮಾದಿಗ ಸಂಬಂಧಿತ ಜಾತಿಗಳು ಬೀದಿಗಿಳಿದು, ಉಗ್ರ ಹೋರಾಟಕ್ಕೆ ಕೈ ಹಾಕಬೇಕಾಗುತ್ತದೆ. ನಾಗಮೋಹನ ದಾಸ್ ವರದಿಯನ್ನು ಸುಟ್ಟು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕು. ಇಲ್ಲವಾದರೆ ‍ಆ.15ರಂದು ದಾವಣಗೆರೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.

ಹಿಂದಿನಿಂದಲೂ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟಗಳನ್ನು ತಾಲೂಕು, ಜಿಲ್ಲಾ ಕೇಂದ್ರ, ರಾಜ್ಯಮಟ್ಟದಲ್ಲಿ ಮಾಡಿದ್ದ ಸಮುದಾಯ ಮತ್ತೆ ಬೀದಿಗಿಳಿದು ಉಗ್ರ ಹೋರಾಟಕ್ಕೆ ಇಳಿಯುವ ಮುನ್ನವೇ ಸರ್ಕಾರ ನಮ್ಮ ಮುಖ್ಯ ಬೇಡಿಕೆಯಾದ ಶೇ.6 ಮೀಸಲಾತಿ ನೀಡಲಿ. ಇಲ್ಲವಾದರೆ ಮತ್ತೆ ತೀವ್ರ ಸ್ವರೂಪದ ಹೋರಾಟಕ್ಕೆ ಮಾದಿಗ ಸಮುದಾಯ ಸಜ್ಜಾಗಬೇಕಾದೀತು ಎಂದರು.

ಉಭಯ ಸಂಘಟನೆಗಳ ಮುಖಂಡರಾದ ಪಂಜು ಪೈಲ್ವಾನ್, ಗುಮ್ಮನೂರು ಮಂಜಪ್ಪ, ರಾಘವೇಂದ್ರ ಡಿ.ಕಡೇಮನಿ, ಮಲ್ಲಿಕಾರ್ಜುನ ವಂದಾಲಿ, ಆಲೂರು ಕೆ.ಎಚ್.ಹನುಮಂತಪ್ಪ, ಹೂವಿನಮಡು ಮೈಲಾರಪ್ಪ, ಹಳಗವಾಡಿ ನಿಂಗಪ್ಪ, ಗುಮ್ಮನೂರು ರಾಮಚಂದ್ರ, ಎಂ.ರವಿ, ಸಿ.ಬಸವರಾಜ, ರವಿಕುಮಾರ ಇತರರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ