ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಯಡ್ತಾರೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಬೆಳ್ಳಂಗಿ ಗ್ರಾಮದ ಕಬ್ಬರ್ಗಿ ವರೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ವಿನಂತಿಸಿದರು.
ಇದೇವೇಳೆ ಗ್ರಾಮಸ್ಥರು ಇನ್ನೊಂದು ಸಮಸ್ಯೆಯ ಕುರಿತು ಶಾಸಕರ ಗಮನ ಸೆಳೆದರು. ಕಬ್ಬರ್ಗಿಯಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕುಮಟಾ ಕಡೆಗೆ ಬರುತ್ತಾರೆ. ಆದರೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕುಮಟಾದಿಂದ ಬೆಳ್ಳಂಗಿಯ ಕಬ್ಬರ್ಗಿ ವರೆಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.
ಸ್ಥಳಕ್ಕೆ ವಾಕರಸಾ ಡಿಪೋ ವ್ಯವಸ್ಥಾಪಕ ವಿನಾಯಕ ಭಂಡಾರಿ ಅವರನ್ನು ಕರೆಯಿಸಿ, ಗ್ರಾಮಸ್ಥರ ಸಮಸ್ಯೆ ಕುರಿತು ಶಾಸಕರು ಚರ್ಚಿಸಿದರು. ಬಸ್-ಸಿಬ್ಬಂದಿ ಕೊರತೆ ಇನ್ನಿತರ ಕಾರಣದಿಂದ ತಕ್ಷಣದಿಂದಲೇ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸಲು ಅಸಾಧ್ಯವಾಗಿರುವುದರಿಂದ ಯಾಣ-ಬೆಳ್ಳಂಗಿ ಮಾರ್ಗದ ಬಸ್ ವೇಳಾಪಟ್ಟಿಯನ್ನೇ ಸ್ವಲ್ಪ ಬದಲಾವಣೆ ಮಾಡಿ ಕಬ್ಬರ್ಗಿ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ದಿನದಲ್ಲಿ ಹೆಚ್ಚುವರಿ ಬಸ್ ಒದಗಿಸುವ ಬಗ್ಗೆ ಕ್ರಮಕೈಗೊಳ್ಳುವ ಭರವಸೆಯನ್ನು ಶಾಸಕ ದಿನಕರ ಶೆಟ್ಟಿ ನೀಡಿದರು.ಜಿಪಂ ಮಾಜಿ ಸದಸ್ಯ ಗಜಾನನ ಪೈ, ಅಳಕೋಡ ಗ್ರಾಪಂ ಮಾಜಿ ಅಧ್ಯಕ್ಷ ದೇವು ಗೌಡ, ಮಾಜಿ ಸದಸ್ಯರಾದ ಶ್ರೀಧರ ಪೈ, ಮಹೇಶ ದೇಶಭಂಡಾರಿ, ಅಂಗವಿಕಲ ಕ್ರೀಡಾಪಟು ಪ್ರಕಾಶ ವಿ. ನಾಯ್ಕ, ಯಡ್ತಾರೆಯ ಜಯಂತ ಗೌಡ, ಗಣಪತಿ ಗೌಡ, ಕಬ್ಬರ್ಗಿಯ ಮಂಜುನಾಥ ಗೌಡ, ಗಣೇಶ ಗೌಡ, ಹುಲಿಯಮ್ಮ ಗೋವಿಂದ ಗೌಡ, ಮಾಲಿನಿ ನಾಗರಾಜ ಗೌಡ, ಪ್ರೇಮಾ ಶ್ರೀಧರ ಗೌಡ, ಶಾಂತಿ ವಿನೋದ ಗೌಡ, ಹರೀಶ ಗೌಡ, ಸಂತೋಷ ಗೌಡ, ಸುರೇಶ ಪಟಗಾರ, ವಿದ್ಯಾಧರ ಉಪಾಧ್ಯಾಯ, ಕಮಲಾ ಶಂಕರ ಗೌಡ ಇನ್ನಿತರರು ಇದ್ದರು.