ಬೇಡಿಕೆಗನುಸಾರವಾಗಿ ಘಟಕಗಳನ್ನು ಗುರುತಿಸಿ ಸ್ಥಾಪಿಸಿ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್

KannadaprabhaNewsNetwork |  
Published : Jun 07, 2026, 02:15 AM IST
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಬೇಕರಿ ಘಟಕದಡಿ ತಯಾರಿಸಲಾದ ಕೇಕ್‌ ಕತ್ತರಿಸಿದರು. | Kannada Prabha

ಸಾರಾಂಶ

ಇಂದಿನ ಬೇಡಿಕೆಗನುಸಾರವಾಗಿ ಪಿಎಂಎಫ್‌ಎಂಇ ಯೋಜನೆಯಡಿ ವಿವಿಧ ಹೊಸ ಘಟಕಗಳನ್ನು ಗುರುತಿಸುವ ಹಾಗೂ ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಗದಗ: ಇಂದಿನ ಬೇಡಿಕೆಗನುಸಾರವಾಗಿ ಪಿಎಂಎಫ್‌ಎಂಇ ಯೋಜನೆಯಡಿ ವಿವಿಧ ಹೊಸ ಘಟಕಗಳನ್ನು ಗುರುತಿಸುವ ಹಾಗೂ ಸ್ಥಾಪಿಸುವ ಅವಶ್ಯಕತೆಯಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಹಾಗೂ ಆತ್ಮ ನಿರ್ಭರ ಭಾರತ ಅಭಿಯಾನದ ಅಂಗವಾಗಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಬೇಕರಿ ಘಟಕದಡಿ ತಯಾರಿಸಲಾದ ಕೇಕ್‌ ಕತ್ತರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುತ್ತಿರುವ ಹೆಸರು, ಕಡಲೆ, ಮೆಕ್ಕೆಜೋಳದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಅಲ್ಲದೇ ವಿವಿಧ ತರಕಾರಿಗಳನ್ನು ಒಣಗಿಸಿ ಪುಡಿ ಮಾಡುವ ಘಟಕಗಳನ್ನು ಆರಂಭಿಸಬೇಕು. ಸಿದ್ಧ ತಿಂಡಿಗಳಾದ ಉಪ್ಪಿಟ್ಟು, ಅವಲಕ್ಕಿ, ಸೂಪ್ ತಯಾರಿಸಲು ಬೇಕಾಗುವ ಎಲ್ಲ ತರಕಾರಿಗಳ ಒಣಗಿಸಿದ ಪುಡಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಒಳ್ಳೆಯ ಪ್ಯಾಕಿಂಗ್ ಮತ್ತು ಬ್ರಾಂಡಿಂಗ್‌ನೊಂದಿಗೆ ಒಳ್ಳೆಯ ಮಾರುಕಟ್ಟೆಯ ಬೆಲೆಯನ್ನು ಪಡೆದು ಆರ್ಥಿಕವಾಗಿ ಹೆಚ್ಚು ಲಾಭ ಪಡೆಯಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಪಿ.ಎಂ.ಎಫ್.ಎಂ.ಇ. ಯೋಜನೆ 2020-21ರಿಂದ ಜಾರಿಯಲ್ಲಿದ್ದು ಯೋಜನೆಯಡಿ ಜಿಲ್ಲೆಯಲ್ಲಿ ಈ ವರೆಗೆ 276 ಆಹಾರ ಸಂಸ್ಕರಣೆ ಘಟಕಗಳ ಸಾಧನೆ ಮಂಡಿಸಿದ ಅವರು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರು ಆದಾಯ ದ್ವಿಗುಣಗೊಳಿಸಲು ಶೇ. 50ರ ಸಹಾಯಧನ (ಕೇಂದ್ರ ಸರ್ಕಾರದ ಶೇ. 35 ಹಾಗೂ ರಾಜ್ಯ ಸರ್ಕಾರದ ಶೇ.15) ಹಾಗೂ ಶೇ. 50ರಷ್ಟು ಬ್ಯಾಂಕ್ ಮೂಲಕ ಸಾಲ ಪಡೆದು ಹೊಸದಾಗಿ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ ಅಥವಾ ಈಗಾಗಲೇ ಇರುವ ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ ಮಾಡಲು ಸೆಪ್ಟೆಂಬರ್ 2026ರ ವರೆಗೆ ಅವಕಾಶವಿದ್ದು ಯೋಜನೆಯ ಲಾಭ ಪಡೆಯಬೇಕು ಎಂದು ತಿಳಿಸಿದರು. .

ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಮ್ಯಾಲನ್‌ಹಳ್ಳಿ ಮಾತನಾಡಿ, ವಿವಿಧ ಬ್ಯಾಂಕ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಬೇಗನೆ ವಿಲೇವಾರಿ ಮಾಡಲು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಸೂಚಿಸಿಲಾಗುವುದು ಎಂದರು.

ಈ ವೇಳೆ ಯೋಜನೆಯಡಿ ಈ ವರೆಗೆ ಹೆಚ್ಚು ಘಟಕಗಳನ್ನು ಸ್ಥಾಪಿಸಿರುವ ಗೀರಿಶ್, ಬಸಪ್ಪ ಹಾಗೂ ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಪಿ.ಎಂ.ಎಫ್.ಎಂ.ಇ. ಘಟಕದಡಿ ತಯಾರಿಸಿದ ಉತ್ಪನ್ನಗಳಾದ ರೊಟ್ಟಿ, ಎಣ್ಣೆ, ಚಿಪ್ಸ್, ಫಾಪ್‌ಕಾರ್ನ್ ಹಾಗೂ ಇತ್ಯಾದಿಗಳನ್ನು ಪ್ರದರ್ಶಿಸಲಾಯಿತು.

ಕೃಷಿ ಇಲಾಖೆಯ ಉಪ-ಕೃಷಿ ನಿರ್ದೇಶಕರು, ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಇಲಾಖೆಯ ಮುಖ್ಯಸ್ಥರು, ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಗೂ ಆತ್ಮ ಸಿಬ್ಬಂದಿ ಇದ್ದರು. ಉಪ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಸೀಮಾ ಸವಣೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಅರ್ಧ ತಾಸು ಸತತ ಮಳೆ: ಹೊಳೆಯಾದ ಮುಖ್ಯರಸ್ತೆ
ಯಡ್ತಾರೆ-ಕಬ್ಬರ್ಗಿಗೆ ರಸ್ತೆ, ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ