ಎಸ್‌ಡಿಪಿಐ ರಾಜ್ಯ, ಜಿಲ್ಲಾ ಘಟಕ ಆಗ್ರಹ । ಜಿಲ್ಲಾಸ್ಪತ್ರೆಯಲ್ಲಿ ವಿಕಲಚೇತನರಿಗೆ ಅಗತ್ಯ ಔಷಧಿ ಪೂರೈಸಲು ಅಧಿಕಾರಿಗಳಿಗೆ ಮನವಿ
ಮಾನಸಿಕ ರೋಗಿಗಳಿಗೆ ಕನಿಷ್ಠ 2 ತಿಂಗಳಿಗಾಗುವಷ್ಟು ಔಷಧಿ, ಮಾತ್ರೆಗಳನ್ನು ವಿತರಿಸುವಂತೆ ಹಾಗೂ ವಿಶೇಷ ಚೇತನರಿಗೆ ಅಗತ್ಯ ಔಷಧಿಗಳನ್ನು ಆಸ್ಪತ್ರೆಯಲ್ಲೇ ಲಭ್ಯವಾಗುವಂತೆ ಖಚಿತಪಡಿಸುವಂತೆ ಎಸ್‌ಡಿಪಿಐ ರಾಜ್ಯ ಮತ್ತು ಜಿಲ್ಲಾ ಘಟಕವು ದಾವಣಗೆರೆ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದೆ.
ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಅಧೀಕ್ಷಕರನ್ನು ಭೇಟಿ ಮಾಡಿದ್ದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಇತರರ ನೇತೃತ್ವದಲ್ಲಿ ಮನವಿ ಅರ್ಪಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಜಿಲ್ಲಾಸ್ಪತ್ರೆಯಲ್ಲಿ ಮಾನಸಿಕ ರೋಗಿಗಳು ಹಾಗೂ ವಿಕಲಚೇತನರಿಗೆ ಸಮರ್ಪಕವಾಗಿ ಔಷಧಿ, ಮಾತ್ರೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.ಇದೇ ವೇಳೆ ಮಾತನಾಡಿದ ಅಫ್ಸರ್ ಕೊಡ್ಲಿಪೇಟೆ, ಜಿಲ್ಲೆಯ ಗ್ರಾಮೀಣ ಪ್ರದೇಶ, ದೂರದ ಊರುಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೇವಲ 15 ದಿನದ ಔಷಧಿ ವಿತರಿಸುತ್ತಾರೆಂಬ ದೂರು ಇದೆ. ಈ ವ್ಯವಸ್ಥೆಯನ್ನು ವೈದ್ಯಕೀಯ ನಿಯಮಗಳ ವ್ಯಾಪ್ತಿಯಲ್ಲಿ ಮರು ಪರಿಶೀಲಿಸಿ, ರೋಗಿ ಆರೋಗ್ಯ ಸ್ಥಿತಿಗನುಗುಣವಾಗಿ ಸಾಧ್ಯವಿರುವ ಸಂದರ್ಭದಲ್ಲಿ ಕನಿಷ್ಠ 2 ತಿಂಗಳ ಅವಧಿಗೆ ಅಗತ್ಯ ಔಷಧಿ ವಿತರಿಸುವ ವ್ಯವಸ್ಥೆ ಕಲ್ಪಿಸಿ ಎಂದು ಒತ್ತಾಯಿಸಿದರು.
ವಿಶೇಷವಾಗಿ ಬಡ ಕುಟುಂಬ, ವಯೋವೃದ್ಧರು, ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವವರು ಹಾಗೂ ರೋಗಿಗಳ ಆರೈಕೆದಾರರಿಗೆ ಇದು ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ. ರೋಗಿಯ ಆರೋಗ್ಯ ಸ್ಥಿತಿ ಮತ್ತು ವೈದ್ಯಕೀಯ ಅಗತ್ಯ ಪರಿಗಣಿಸಿ, ವೈದ್ಯಕೀಯ ಮಾರ್ಗಸೂಚಿಗನುಗುಣವಾಗಿ ಸಾಧ್ಯವಿದ್ದರೆ ಕನಿಷ್ಠ 2 ತಿಂಗಳ ಔಷಧಿಯನ್ನು ಒಮ್ಮೆಲೇ ವಿತರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಇದರಿಂದ ರೋಗಿಗಳು ಪದೇಪದೇ ಆಸ್ಪತ್ರೆಗೆ ಬರುವ ಅನಿವಾರ್ಯತೆ ಕಡಿಮೆಯಾಗುತ್ತದೆ. ನಿರಂತರ ಔಷಧಿ ಸೇವನೆಯೂ ಸುಗಮವಾಗಲಿದೆ ಎಂದು ತಿಳಿಸಿದರು.
ಔಷಧಿ ಕೊರತೆ ಅಥವಾ ಪೂರೈಕೆ ಸಮಸ್ಯೆ ಇದ್ದರೆ ಅದನ್ನು ತಕ್ಷಣ ಪರಿಹರಿಸಬೇಕು. ಜಿಲ್ಲಾ ಆರೋಗ್ಯ ಇಲಾಖೆ ಡಿಎಚ್‌ಓ, ಜಿಲ್ಲಾಸ್ಪತ್ರೆ ಅಧೀಕ್ಷಕರು ಕೈಗೊಂಡ ಕ್ರಮಗಳ ಬಗ್ಗೆ ಸಾರ್ವಜನಿಕರು, ಎಸ್‌ಡಿಪಿಐ ಹಾಗೂ ರೋಗಿಗಳ ಕಡೆಯವರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ವಿಕಲಚೇತನರಿಗೆ ಅಗತ್ಯ ಮಲ್ಟಿ ವಿಟಮಿನ್ ಸಿರಪ್ ಸೇರಿದಂತೆ ಕೆಲ ಔಷಧಿಗಳನ್ನು ಆಸ್ಪತ್ರೆಯಲ್ಲಿ ನೀಡದೇ, ಹೊರಗಿನ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸುವಂತೆ ಚೀಟಿಯಲ್ಲಿ ಬರೆದುಕೊಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ, ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
------