ನಂಜನಗೂಡು-ಗುಂಡ್ಲುಪೇಟೆ ರಸ್ತೆಯಲ್ಲಿ ವಾಹನಗಳ ಓಡಾಟ ದಿನೇ ದಿನೇ ಹೆಚ್ಚಳ : ಚತುಷ್ಪಥಗೊಳಿಸಲು ಆಗ್ರಹ

KannadaprabhaNewsNetwork | Updated : Sep 07 2024, 06:01 AM IST

ಸಾರಾಂಶ

ಮೈಸೂರು-ನಂಜನಗೂಡು ತನಕ ನಾಲ್ಕು ಪಥ ರಸ್ತೆಯಾಗಿ ಹಲವು ವರ್ಷಗಳಾಗಿವೆ. ಆದರೆ ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲೂ ವಾಹನಗಳ ಸಾಲು ಸಾಲು ಕಂಡು ಸಾರ್ವಜನಿಕರು ಅವಾಕ್ಕಾಗುತ್ತಿದ್ದಾರೆ.  

ರಂಗೂಪುರ ಶಿವಕುಮಾರ್‌

 ಗುಂಡ್ಲುಪೇಟೆ : ಗುಂಡ್ಲುಪೇಟೆ-ನಂಜನಗೂಡು ರಸ್ತೆಯಲ್ಲಿ ವಾಹನಗಳ ಓಡಾಟ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ರಸ್ತೇನಾ ನಾಲ್ಕು ಪಥ ರಸ್ತೆಯಾಗಿ ಪರಿವರ್ತಿಸದಿದ್ದಲ್ಲಿ ಈ ಹೆದ್ದಾರಿಯಲ್ಲಿ ಸಂಚರಿಸುವ ಸವಾರರನ್ನು ದೇವರೂ ಕೂಡ ಕಾಪಾಡಲಾರ!ಮೈಸೂರು-ನಂಜನಗೂಡು ತನಕ ನಾಲ್ಕು ಪಥ ರಸ್ತೆಯಾಗಿ ಹಲವು ವರ್ಷಗಳಾಗಿವೆ. ಆದರೆ ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲೂ ವಾಹನಗಳ ಸಾಲು ಸಾಲು ಕಂಡು ಸಾರ್ವಜನಿಕರು ಅವಾಕ್ಕಾಗುತ್ತಿದ್ದಾರೆ. ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ಶನಿವಾರ, ಭಾನುವಾರ ಮತ್ತು ಹಬ್ಬ ಹರಿದಿನಗಳ ರಜಾ ದಿನಗಳಲ್ಲಂತೂ ಸಹಸ್ರಾರು ವಾಹನಗಳು ಎಡೆಬಿಡದೆ ಸಂಚರಿಸುತ್ತಿವೆ. ಮೈಸೂರು ಕಡೆಯಿಂದ ನೆರೆಯ ರಾಜ್ಯಗಳಾದ ಕೇರಳ ಹಾಗೂ ಊಟಿಗೆ ತೆರಳುವ ಕಾರಣ ಗುಂಡ್ಲುಪೇಟೆಯ ಮಾರ್ಗದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲೀಗ ವಾಹನಗಳಿಗೆ ಹೆದ್ದಾರಿ ಸಾಕಾಗುತ್ತಿಲ್ಲ.

ಸಂಜೆ ೭ರಿಂದ ೯ಗಂಟೆಯ ತನಕ ಈ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸವಾರರು ಜೀವವನ್ನು ಕೈಯಲ್ಲಿಟ್ಟುಕೊಂಡು ಚಲಿಸುತ್ತಿದ್ದಾರೆ. ಈ ಸಮಯದಲ್ಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.

ಕಾರಣವೇನು?:

ಬಂಡೀಪುರ ರಾಷ್ಟ್ರೀಯ ಉದ್ಯಾನವನ ನಡುವೆ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಸಂಚಾರ ಬಂದ್ ಆಗಿದೆ. ಮೈಸೂರು ಕಡೆಯಿಂದ ಬರುವ ವಾಹನಗಳು ಚೆಕ್‌ಪೋಸ್ಟ್ ಬಂದ್ ಆಗುವ ಮುನ್ನ ತಲುಪುವ ಸಮಯದಲ್ಲಿ ವಾಹನಗಳ ವೇಗ ಕಂಡರೆ ಮೈ ಭಯವಾಗುತ್ತಿದೆ. ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ನಾಲ್ಕು ಪಥದಲ್ಲಿ ಸಂಚರಿಸುವಷ್ಟು ವಾಹನಗಳ ಸಂಚಾರವಿದೆ. ಹಾಗಾಗಿ ಈ ಹೆದ್ದಾರಿಯ ನಾಲ್ಕು ಪಥವಾಗುವ ತನಕ ಸವಾರರ ಕಷ್ಟ ಕೇಳೋರು ಯಾರು ಇಲ್ಲ. ಆರ್.ಧ್ರುವನಾರಾಯಣ ಸಂಸದರಾಗಿದ್ದ ಅವಧಿಯಲ್ಲಿ ನಂಜನಗೂಡು-ಗುಂಡ್ಲುಪೇಟೆ ಹಾಗೂ ಮೈಸೂರು-ಕೊಳ್ಳೇಗಾಲ ನಾಲ್ಕೂ ಪಥ ರಸ್ತೆಯಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಕೇಂದ್ರ ಸರ್ಕಾರದ ಮೇಲೆ ನೂತನ ಸಂಸದ ಸುನೀಲ್‌ ಬೋಸ್‌ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ಹೇರಿ ನಾಲ್ಕು ಪಥದ ರಸ್ತೆಗೆ ಮಂಜೂರಾತಿ ಕೊಡಿಸುವ ಕೆಲಸ ಮಾಡಲಿ ಎಂದು ಸವಾರರು ಒತ್ತಾಯಿಸಿದ್ದಾರೆ.

ಬೇಗ ಆಗಲಿ: ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿ ನಾಲ್ಕು ಪಥ ರಸ್ತೆಯಾಗಬೇಕು ಎಂಬ ಕೂಗು ಈ ಭಾಗದ ಜನರು ಹಾಗೂ ಸವಾರರಲ್ಲಿ ಆಗ್ರಹವಾಗಿದೆ. ಆದರೆ ಜನರ ಕೂಗಿಗಿ ಸಂಸದರು ಸ್ಪಂದಿಸಿ, ನಾಲ್ಕು ಪಥದ ರಸ್ತೆಗೆ ಕಾರಣರಾಗುವರೋ ಕಾದು ನೋಡಬೇಕು.

ಮೈಸೂರು-ನಂಜನಗೂಡು ತನಕ ನಾಲ್ಕು ಪಥದ ರಸ್ತೆಯಾಗಿದೆ. ನಂಜನಗೂಡು-ಗುಂಡ್ಲುಪೇಟೆ ಹೆದ್ದಾರಿ ಸಂಚರಿಸುವ ರಸ್ತೆ ಚಿಕ್ಕದಾಗಿದೆ. ವಾಹನಗಳ ಸವಾರರು ಜೀವ ಭಯದಲ್ಲಿ ಚಾಲನೆ ಮಾಡುತ್ತಿದ್ದಾರೆ. ಗುಂಡ್ಲುಪೇಟೆ-ಹಿರೀಕಾಟಿ ತನಕ ಅಪಘಾತಗಳು ಹೆಚ್ಚಿದೆ. ಇನ್ನಾದರೂ ಎಚ್ಚೆತ್ತು ನಾಲ್ಕು ಪಥದ ರಸ್ತೆಗೆ ಚಾಲನೆ ಬೇಗ ಸಿಗಲಿ.

-ಮಹದೇವು, ಗುಂಡ್ಲುಪೇಟೆ ನಿವಾಸಿ

ನಾಲ್ಕು ಪಥದ ರಸ್ತೆ ಬಗ್ಗೆ ಸಚಿವ ವಿ.ಸೋಮಣ್ಣ ಹೇಳಿದ್ರು!

ಕಳೆದ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಬಿಜೆಪಿ ಹಾಗೂ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಗುಂಡ್ಲುಪೇಟೆ-ನಂಜನಗೂಡು ರಸ್ತೆ ನಾಲ್ಕು ಪಥದ ರಸ್ತೆಯಾಗಲಿದೆ ಎಂದು ಹೇಳಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಂಡ್ಲುಪೇಟೆಗೆ ಬಂದ ಸಮಯದಲ್ಲಿ ಸಚಿವ ವಿ. ಸೋಮಣ್ಣ ನಾಲ್ಕು ಪಥದ ರಸ್ತೆ ಬಗ್ಗೆ ಮಾತನಾಡಿದರು. ಆದರೆ ನಾಲ್ಕು ಪಥದ ರಸ್ತೆ ವಿಚಾರ ಕಾರ್ಯರೂಪಕ್ಕೆ ಬರಲೇ ಇಲ್ಲ.

Share this article