ಮಳವಳ್ಳಿ ಭಾಗದ ಕೆರೆ-ಕಟ್ಟೆ ತುಂಬಿಸದಿದ್ದರೆ ಹೋರಾಟ: ಮಾಜಿ ಶಾಸಕ ಡಾ.ಕೆ. ಅನ್ನದಾನಿ

KannadaprabhaNewsNetwork | Updated : Sep 07 2024, 11:47 AM IST

ಸಾರಾಂಶ

ಗಗನಚುಕ್ಕಿ ಜಲಪಾತೋತ್ಸವ ಮೊದಲು ಆರಂಭಿಸಿದ್ದೇ ಜೆಡಿಎಸ್. ಜಲಪಾತೋತ್ಸವ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕೊನೆಯ ಭಾಗಕ್ಕೆ ನೀರು ಹರಿಸದೆ, ರೈತರ ಬಿತ್ತನೆ ಚಟುವಟಿಕೆಗೆ ಅನುಕೂಲ ಕಲ್ಪಿಸಿಕೊಡದೆ ಜಲಪಾತೋತ್ಸವ ಆಚರಿಸುವುದಕ್ಕೆ ನಮ್ಮ ವಿರೋಧವಿದೆ.

ಮಂಡ್ಯ :  ಮಳವಳ್ಳಿ ಭಾಗದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ, ಕೊನೆಯ ಭಾಗಕ್ಕೆ ನೀರು ತಲುಪುವಂತೆ ಮಾಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸದಿದ್ದರೆ ಜೆಡಿಎಸ್‌ನಿಂದ ರಸ್ತೆತಡೆ, ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಕೆ ನೀಡಿದರು.

ಗಗನಚುಕ್ಕಿ ಜಲಪಾತೋತ್ಸವ ಮೊದಲು ಆರಂಭಿಸಿದ್ದೇ ಜೆಡಿಎಸ್. ಜಲಪಾತೋತ್ಸವ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಕೊನೆಯ ಭಾಗಕ್ಕೆ ನೀರು ಹರಿಸದೆ, ರೈತರ ಬಿತ್ತನೆ ಚಟುವಟಿಕೆಗೆ ಅನುಕೂಲ ಕಲ್ಪಿಸಿಕೊಡದೆ ಜಲಪಾತೋತ್ಸವ ಆಚರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದು ತಿಂಗಳ ಹಿಂದೆ ಗಗನಚುಕ್ಕಿಯಲ್ಲಿ ಜಲವೈಭವವಿತ್ತು. ಒಂದು ಲಕ್ಷ ಕ್ಯುಸೆಕ್‌ನಷ್ಟು ನೀರು ಹರಿದುಹೋಗುತ್ತಿತ್ತು. ಆ ಸಮಯದಲ್ಲೇ ಜಲಪಾತೋತ್ಸವ ಮಾಡಲು ಅವಕಾಶವಿತ್ತು. ಈಗ ನೀರಿಲ್ಲದ ಸಮಯದಲ್ಲಿ ಜಲಪಾತೋತ್ಸವ ಮಾಡಲು ಹೊರಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಲಪಾತೋತ್ಸವ ನಡೆಸುವುದಕ್ಕೆ ಕೆಆರ್‌ಎಸ್‌ನಿಂದ ಒಂದು ಅಥವಾ ಎರಡು ಟಿಎಂಸಿ ನೀರನ್ನು ಹರಿಸಿಕೊಂಡು ಕೃತಕವಾಗಿ ಜಲವೈಭವ ಸೃಷ್ಟಿಸಬೇಕಿದೆ. ಅದೇ ನೀರನ್ನು ರೈತರಿಗೆ ನೀಡಿದರೆ ಅವರ ಬದುಕಿಗೆ ಅನ್ನ ನೀಡಿದಂತಾಗುತ್ತದೆ. ಇಲ್ಲದಿದ್ದರೆ ಜಲಪಾತೋತ್ಸವ ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸಲಾಗುವುದೇ ವಿನಃ ಅದರಿಂದ ಮಳವಳ್ಳಿ ತಾಲೂಕಿನ ರೈತರಿಗೆ ಕಿಂಚಿತ್ತೂ ಉಪಯೋಗಕ್ಕೆ ಬರುವುದಿಲ್ಲ ಎಂದರು.

ಮಳವಳ್ಳಿ ತಾಲೂಕಿನಲ್ಲಿ ಶೇ.೫೦ರಷ್ಟು ಬಿತ್ತನೆಯಾಗಿರುವುದಾಗಿ ಕೃಷಿ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಇದುವರೆಗೆ ಶೇ.೨೫ ರಿಂದ ೩೦ರಷ್ಟು ಮಾತ್ರ ಬಿತ್ತನೆಯಾಗಿದೆ. ಎಲ್ಲಾ ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ. ಕೆರೆಗಳನ್ನು ತುಂಬಿಸುವಲ್ಲೂ ನೀರಾವರಿ ಇಲಾಖೆ ಎಂಜಿನಿಯರ್‌ಗಳು ವಿಫಲರಾಗಿದ್ದಾರೆ. ನಾಲೆಗಳ ನಿರ್ವಹಣೆಯಲ್ಲೂ ಬೇಜವಾಬ್ದಾರಿತನ, ನಿರ್ಲಕ್ಷ್ಯ ತೋರಿರುವುದರಿಂದ ಕೊನೆಯ ಭಾಗಕ್ಕೆ ನೀರು ಹರಿಯದಂತಾಗಿದೆ. ನೀರು ತಲುಪದಿರುವುದಕ್ಕೆ ಇಲಾಖೆ ಅಧಿಕಾರಿಗಳು ತಮ್ಮ ವೈಫಲ್ಯವನ್ನು ಮರೆಮಾಚಿ ಅಮಾಯಕ ರೈತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.

ನೀರಾವರಿ ಇಲಾಖೆ ಅಧಿಕಾರಿಗಳು ಹಗಲು-ರಾತ್ರಿ ಶ್ರಮವಹಿಸಿ ನಾಲೆಗಳಲ್ಲಿ ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಬೇಕು. ನೀರು ಹರಿಯದ ಕಡೆಗಳಲ್ಲಿ ದುರಸ್ತಿ ಮಾಡಿ ಕೊನೆಯ ಭಾಗಕ್ಕೆ ನೀರು ತಲುಪಿಸಬೇಕು. ಪ್ರವಾಹದಿಂದ ಹಲವು ಗ್ರಾಮಗಳ ರೈತರ ಹೊಲ-ಗದ್ದೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸಂತ್ರಸ್ತ ರೈತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇನ್ನು ಹದಿನೈದು ದಿನಗಳೊಳಗೆ ಕೆರೆ-ಕಟ್‌ಟೆಗಳನ್ನು ತುಂಬಿಸಿ, ಕೊನೆಯ ಭಾಗಕ್ಕೆ ನೀರು ತಲುಪುವಂತೆ ಮಾಡಿ ಸಂಪೂರ್ಣ ಬಿತ್ತನೆಯಾಗುವುದಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಇಂಡಿಯಾ ಒಕ್ಕೂಟಕ್ಕೆ ಸೇರಿರುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಕಾಂಗ್ರೆಸ್ ನಾಯಕರು ಏಕೆ ಮಾತನಾಡುತ್ತಿಲ್ಲ. ಅವರಿಬ್ಬರೂ ಪರಸ್ಪರ ಮಾತುಕತೆ ನಡೆಸಿ ಒಮ್ಮತಕ್ಕೆ ಬಂದರೆ ಪ್ರಧಾನಿಯವರ ಮನವೊಲಿಸಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕುಮಾರಸ್ವಾಮಿ ಅನುಮತಿ ದೊರಕಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

೨೦೨೦ರ ಜನವರಿ ತಿಂಗಳಲ್ಲಿ ನಾನೂ ಜಲಪಾತೋತ್ಸವ ಮಾಡಿದ್ದೆ. ಆ ಸಮಯದಲ್ಲಿ ತಾಲೂಕಿನ ಎಲ್ಲಾ ಕೆರೆಗಳು ಭರ್ತಿಯಾಗಿದ್ದವು. ನಾಲೆಯ ನೀರು ತಲುಪಿ ಬಿತ್ತನೆ ಚಟುವಟಿಕೆಯೂ ಸಂಪೂರ್ಣವಾಗಿತ್ತು. ಹಾಗಾಗಿ ಗಗನಚುಕ್ಕಿ ಜಲಪಾತೋತ್ಸವ ಅಂದು ನಡೆಸಿದ್ದಾಗಿ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

ಕ್ಷೇತ್ರದ ಶಾಸಕರಾದವರು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನಾಲೆಗಳ ಮೇಲೆ ಹೋಗಿ ಬಂದರೆ ಪ್ರಯೋಜನವಿಲ್ಲ. ಎಲ್ಲಿ ನೀರಿಗೆ ತಡೆ ಉಂಟಾಗಿದೆ. ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ, ದುರಸ್ತಿಯಾಗಬೇಕಿರುವುದು ಎಲ್ಲಿ ಎನ್ನುವುದನ್ನು ಗುರುತಿಸಿ, ಸಮಸ್ಯೆಗಳನ್ನು ಪರಿಹರಿಸಿ ನೀರು ತರುವ ಕೆಲಸ ಮಾಡಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಲಹೆ ನೀಡಿದರು.

ಗೋಷ್ಠಿಯಲ್ಲಿ ಸಾತನೂರು ಜಯರಾಂ, ಕಾಂತರಾಜು, ಶ್ರೀಧರ್, ಸಿದ್ದಾಚಾರಿ, ಅನಿಲ್, ಶಂಕರ್ ಇದ್ದರು.

Share this article