ಕೃಷಿ ಇಲಾಖೆ ಆವರಣದಲ್ಲಿ ತಾಲೂಕು ಕೃಷಿಕ ಸಮಾಜದ ಸಭೆ
ಬತ್ತದ ಬೀಜದ ಧಾರಣೆ ಏರಿಕೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಸರ್ಕಾರ ಬತ್ತದ ಬೀಜದ ಧಾರಣೆ ಇಳಿಸಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ನೀಲೇಶ್ ಸರ್ಕಾರವನ್ನು ಆಗ್ರಹಿಸಿದರು.
ಶನಿವಾರ ಕೃಷಿ ಇಲಾಖೆ ಆವರಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೆಲವು ಅಧಿಕಾರಿಗಳು ಕೃಷಿಕ ಸಮಾಜದ ಸಭೆಗೆ ಆಗಮಿಸಿಲ್ಲ. 8 ದಿನದ ಮುಂಚೆಯೇ ನೊಟೀಸ್ ಕಳಿಸಲಾಗಿತ್ತು. ಆದರೂ ಬಂದಿಲ್ಲ. ಅವರಿಗೆ ಕಾರಣ ಕೇಳಿ ನೊಟೀಸ್ ನೀಡಬೇಕು ತಾಲೂಕು ಕೃಷಿಕ ಸಮಾಜದ ಸದಸ್ಯ ಕಾರ್ಯದರ್ಶಿ ಮಹೇಶ್ ಗೆ ಸೂಚಿಸಿದರು.ತಾಲೂಕು ಕೃಷಿಕ ಸಮಾಜದ ಸಭೆಯ ನಡಾವಳಿಯನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಕಳಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಬೇಕು ಎಂದರು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ಈ ಹಿಂದೆ ತೋಟಗಾರಿಕೆ ಇಲಾಖೆ ಮೈಲು ತುತ್ತು ನೀಡಿತ್ತು. ಮತ್ತೆ ಮೈಲುತುತ್ತು ನೀಡಬೇಕು. ತೋಟಗಾರಿಕೆ ಇಲಾಖೆ ಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಗ್ರಾಮ ಸಭೆಯಲ್ಲಿ ತಿಳಿಸಬೇಕು ಎಂದರು.
ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಮುತ್ತಿನಕೊಪ್ಪ ನರ್ಸರಿಯಿಂದ ಗಿಡ ನೀಡಿದರೆ ರೈತರಿಗೆ ಹೋಗಿ ಬರಲು ದೂರವಾಗುತ್ತದೆ. ಸಿಂಸೆಯಲ್ಲಿ ಗಿಡ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬತ್ತದ ಬೆಳೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಮಹಿಳಾ ರೈತರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಕಣಬೂರು ಮಂಜಮ್ಮ, ಜಿಲ್ಲಾ ಮಟ್ಟದ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬನ್ನೂರು ಸಣ್ಣೇಗೌಡ, ದ್ವಿತೀಯ ಸ್ಥಾನ ಪಡೆದ ಕೆ.ಎಸ್.ದಿವಾಕರ ಕರುಗುಂದ, ತೃತೀಯ ಸ್ಥಾನ ಪಡೆದ ಕೆ. ಕಣಬೂರು ಪೊಂಪಣ್ಣ, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಗಲಾಪುರ ಸತೀಶ್, ದ್ವಿತೀಯ ಸ್ಥಾನ ಪಡೆದ ಶಿರಗಳಲೆ ಪಿ.ವಿ.ಜಾರ್ಜ, ಮುತ್ತಿನಕೊಪ್ಪ ಸಿ.ಆರ್.ಕೃಷ್ಣಮೂರ್ತಿ, ತಾಲೂಕು ಮಟ್ಟದ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂಕ್ಸೆಯ ಲಲಿತ, ದ್ವಿತೀಯ ಸ್ಥಾನ ಪಡೆದ ಕಡಹಿನ ಬೈಲಿನ ಎಂ.ಟಿ.ಲಕ್ಷ್ಮೀದೇವಿ, ತೃತೀಯ ಸ್ಥಾನ ಪಡೆದ ಕಡಹಿನಬೈಲಿನ ಪದ್ಮಾವತಿ ಅವರನ್ನು ಸನ್ಮಾನಿಸಲಾಯಿತು.