ಬಾಕಿ ವೃದ್ಧಾಪ್ಯ ವೇತನ ಬಿಡುಗಡೆ ಮಾಡುವಂತೆ ತಹಸೀಲ್ದಾರರಿಗೆ ಆಗ್ರಹ

KannadaprabhaNewsNetwork |  
Published : Jul 04, 2026, 02:15 AM IST
ವೃದ್ಧಾಪ್ಯ ವೇತನ ಬಿಡುಗಡೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವೃದ್ಧಾಪ್ಯ ವೇತನ ಅನೇಕ ಹಿರಿಯ ನಾಗರಿಕರ ಜೀವನಾಧಾರವಾಗಿದ್ದು, ವೇತನ ವಿಳಂಬದಿಂದ ಔಷಧೋಪಚಾರ, ಆಹಾರ ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸಲು ತೊಂದರೆಯಾಗುತ್ತಿದೆ.

ಶಿರಹಟ್ಟಿ: ತಾಲೂಕಿನ ಕೆಲವು ವಯೋವೃದ್ಧ ಬಡವರ ಮಾಸಿಕ ವೃದ್ಧಾಪ್ಯ ವೇತನ ಸ್ಥಗಿತಗೊಂಡಿದ್ದು, ಕೂಡಲೇ ಬಿಡುಗಡೆಗೆ ಆಗ್ರಹಿಸಿ ಶುಕ್ರವಾರ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಸಂಘದ ವತಿಯಿಂದ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ನಮ್ಮ ಸಂಘದ ಕೆಲವು ಹಿರಿಯ ನಾಗರಿಕರ ವೃದ್ಧಾಪ್ಯ ವೇತನವು ಅನೇಕ ತಿಂಗಳುಗಳಿಂದ ಸ್ಥಗಿತಗೊಂಡಿದ್ದು, ಕೂಡಲೇ ಬಾಕಿ ಉಳಿದಿರುವ ವೃದ್ಧಾಪ್ಯ ವೇತನವನ್ನು ಬಿಡುಗಡೆ ಮಾಡಿ ಫಲಾನುಭವಿಗಳ ಖಾತೆಗೆ ಜಮೆ ಮಾಡಬೇಕು.

ವೃದ್ಧಾಪ್ಯ ವೇತನ ಅನೇಕ ಹಿರಿಯ ನಾಗರಿಕರ ಜೀವನಾಧಾರವಾಗಿದ್ದು, ವೇತನ ವಿಳಂಬದಿಂದ ಔಷಧೋಪಚಾರ, ಆಹಾರ ಹಾಗೂ ದೈನಂದಿನ ಅಗತ್ಯಗಳನ್ನು ಪೂರೈಸಲು ತೊಂದರೆಯಾಗುತ್ತಿದೆ. ಆದ್ದರಿಂದ ಬಾಕಿ ಇರುವ ಎಲ್ಲ ವೇತನವನ್ನು ತಕ್ಷಣ ಬಿಡುಗಡೆ ಮಾಡುವುದರ ಜತೆಗೆ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ನಿಯಮಿತವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ಕುರಿತಂತೆ ಸಂಘಕ್ಕೆ ವಯೋವೃದ್ಧರು ಅವಶ್ಯವಿರುವ ದಾಖಲೆಗಳನ್ನು ಸಹ ನೀಡಿದ್ದಾರೆ. ೧೮ ಜನ ಸದಸ್ಯರ ದಾಖಲೆ ಲಗತ್ತಿಸಲಾಗಿದೆ. ಅವುಗಳನ್ನು ಪರಿಶೀಲಿಸಿ ಬಡ ವೃದ್ಧರ ಪಿಂಚಣಿ ಪುನ ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.

ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮನವಿ ಸ್ವೀಕರಿಸಿ ಸಂಬಂಧಿಸಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮನವಿ ನೀಡುವಲ್ಲಿ ಸಿ.ವಿ. ಕೋಲಕಾರ, ಚಂಬಣ್ಣ ಬಾಳಿಕಾಯಿ, ಐ.ಎಸ್. ಮಡಿವಾಳರ, ಪಿ.ಡಿ. ತೋಟದ, ಸುರೇಶ ನಾವಿ, ಶಕುಂತಲಾ ಅಳಗವಾಡಿ, ಎನ್.ವಿ. ಹೇಮಗಿರಿಮಠ, ಕುಬೇರಪ್ಪ ಮಹಾಂತಶೆಟ್ಟರ, ಗೋಪಾಲ ಫಡ್ನೇಶಿ, ದೇವಣ್ಣ ಬಳಿಗಾರ, ಚಂದ್ರಶೇಖರ ಸವದತ್ತಿ, ಎನ್.ಎಸ್. ಪವಾಡಶೆಟ್ಟರ, ಸೂರಿಗಪ್ಪ ವಾಲಿಶೆಟ್ಟರ ಸೇರಿ ಅನೇಕರು ಇದ್ದರು. ಬೆಳೆವಿಮೆ: ಸ್ವಯಂ ದೃಢೀಕರಣ ಕಡ್ಡಾಯ

ಶಿರಹಟ್ಟಿ: ಕೇಂದ್ರ ಸರ್ಕಾರದ ಪತ್ರದನ್ವಯ ೨೦೨೬- ೨೭ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಎಲ್ಲ ಸಾಲ ಪಡೆಯದ ರೈತರು ಕಡ್ಡಾಯವಾಗಿ ಸ್ವಯಂ ಘೋಷಣೆಯನ್ನು ಸಲ್ಲಿಸಲು ತಿಳಿಸಲಾಗಿದೆ.

ಬೆಳೆ ವಿಮೆಯಡಿ ಅಧಿಸೂಚಿತ ಬೆಳೆಗೆ ನೋಂದಾಯಿಸಿಕೊಳ್ಳಲು ಯಾವುದೇ ವಾಣಿಜ್ಯ ಬ್ಯಾಂಕ್‌ಗಳು/ ಪ್ರಾದೇಶಿಕ ಗ್ರಾಮೀಣ ಅಥವಾ ಕೃಷಿ ಸಾಲ ಮಂಜೂರಾಗಿರುವುದಿಲ್ಲವೆಂದು ಸ್ವಯಂ ದೃಢೀಕರಿಸುವುದು ಕಡ್ಡಾಯವಾಗಿದೆ ಮತ್ತು ದೃಢೀಕರಣದ ನಮೂನೆಗಳು ಸಿಎಸ್‌ಸಿ ಗ್ರಾಮ ಒನ್ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ರೈತರು ಪ್ರಿಮಿಯಂ ಮೊತ್ತವನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲು, ಹತ್ತಿ ಮತ್ತು ಹೆಸರು ಬೆಳೆಗಳಿಗೆ ಇದೇ ಜು. ೧೫ ಮತ್ತು ಗೋವಿನಜೋಳ, ಶೇಂಗಾ, ತೊಗರಿ, ಭತ್ತ ಬೆಳೆಗಳಿಗೆ ಜು. ೩೧ ಹಾಗೂ ಸೂರ್ಯಕಾಂತಿ ಬೆಳೆಗೆ ಆ. ೧೪ ಕೊನೆಯ ದಿನ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ ಕಾಶಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಕೊಟ್ಟ ಮುಂಗಾರು; ಗುರ್ಜಿ ಆಟ, ಪ್ರಾರ್ಥನೆ
ಸೌರ ಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಭೀಮಣ್ಣ