ಎಲ್‌ಎಲ್ ಕಾಲುವೆಗೆ ಡಿ.15ರವರೆಗೆ ನೀರು ಹರಿಸಲು ಆಗ್ರಹ

KannadaprabhaNewsNetwork |  
Published : Nov 13, 2026, 02:30 AM IST
 ಕಂಪ್ಲಿಯಲ್ಲಿ ನಡೆದ ರೈತರ ಸಭೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ ಮಾತನಾಡಿದರು. ರೈತ ಮುಖಂಡರಾದ ವಿ.ವೀರೇಶ್, ಕೊಟ್ಟೂರು ರಮೇಶ್, ಟಿ.ಗಂಗಣ್ಣ, ವಿ.ಟಿ.ರಾಜು ಹಾಗೂ ಬಿ.ಎಂ.ರುದ್ರಯ್ಯಸ್ವಾಮಿ ಇದ್ದರು. | Kannada Prabha

ಸಾರಾಂಶ

ಬಹುತೇಕ ಬೆಳೆಗಳು ನಿರ್ಣಾಯಕ ಬೆಳವಣಿಗೆಯ ಹಂತದಲ್ಲಿವೆ

ಕಂಪ್ಲಿ: ಎಲ್‌ಎಲ್ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳ ರಕ್ಷಣೆಗಾಗಿ ಡಿ. 15ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ನ. 14ರಂದು ಕಂಪ್ಲಿಯಿಂದ ಮುನಿರಾಬಾದ್ ನೀರಾವರಿ ಕೇಂದ್ರ ಕಚೇರಿವರೆಗೆ ರೈತರ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ತಿಳಿಸಿದರು.

ಪಟ್ಟಣದ ಉದ್ಭವ ಗಣಪತಿ ದೇವಸ್ಥಾನದಿಂದ ನ. 14ರಂದು ಶನಿವಾರ ಬೆಳಗ್ಗೆ 9 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯು ರಾಮಸಾಗರ, ಕಮಲಾಪುರ ಮಾರ್ಗವಾಗಿ ಗಾಳೆಮ್ಮ ಗುಡಿ ತಲುಪಲಿದ್ದು, ಅಂದು ರಾತ್ರಿ ಅಲ್ಲಿಯೇ ರೈತರು ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಭಾನುವಾರ ಮುನಿರಾಬಾದ್ ತಲುಪಿ ಸೋಮವಾರ ಮುನಿರಾಬಾದ್‌ನ ನೀರಾವರಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ನೀರಿನ ಬೇಡಿಕೆಯನ್ನು ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಪಟ್ಟಣದಲ್ಲಿ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಎಲ್‌ಎಲ್ ಕಾಲುವೆ ವ್ಯಾಪ್ತಿಯ ರೈತರು ಈಗಾಗಲೇ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದು, ಬಹುತೇಕ ಬೆಳೆಗಳು ನಿರ್ಣಾಯಕ ಬೆಳವಣಿಗೆಯ ಹಂತದಲ್ಲಿವೆ. ಈ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ದೊರೆಯದಿದ್ದರೆ ರೈತರು ವರ್ಷವಿಡೀ ಶ್ರಮಪಟ್ಟು ಬೆಳೆದ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಬೆಳೆಗಳಿಗೆ ಅಗತ್ಯವಿರುವ ನೀರು ಪೂರೈಕೆಯಾಗದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.

ರೈತರ ಬೆಳೆ ಉಳಿಸುವ ದೃಷ್ಟಿಯಿಂದ ಎಲ್‌ಎಲ್ ಕಾಲುವೆಗೆ ಡಿ. 15ರವರೆಗೆ ನಿರಂತರವಾಗಿ ನೀರು ಹರಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಈಗಾಗಲೇ ರೈತರು ಹಲವು ಬಾರಿ ಮನವಿ, ಸಭೆ ಹಾಗೂ ಹೋರಾಟಗಳ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಆದರೂ ರೈತರ ಬೇಡಿಕೆಗೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆ ಇದೀಗ ಪಾದಯಾತ್ರೆ ಹಾಗೂ ಕಚೇರಿ ಮುತ್ತಿಗೆ ಹೋರಾಟಕ್ಕೆ ಮುಂದಾಗಲಾಗಿದೆ ಎಂದು ತಿಳಿಸಿದರು.

ಇದು ಕೇವಲ ಒಂದು ಗ್ರಾಮದ ಅಥವಾ ತಾಲೂಕಿನ ರೈತರ ಸಮಸ್ಯೆಯಲ್ಲ. ಕಾಲುವೆ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿರುವ ಜಿಲ್ಲೆಯ ಸಮಸ್ತ ರೈತರ ಬದುಕಿನ ಪ್ರಶ್ನೆಯಾಗಿದೆ. ಆದ್ದರಿಂದ ರೈತರ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಜಿಲ್ಲೆಯ ಎಲ್ಲ ರೈತರು, ರೈತಪರ ಸಂಘಟನೆಗಳ ಮುಖಂಡರು ಹಾಗೂ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು. ಬೆಳೆ ಉಳಿಸಿಕೊಳ್ಳಲು ಅಗತ್ಯವಿರುವ ನೀರನ್ನು ಪಡೆದುಕೊಳ್ಳುವವರೆಗೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ ಎಂದು ಬಿ.ವಿ. ಗೌಡ ಕರೆ ನೀಡಿದರು.

ಸಭೆಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ವಿ. ವೀರೇಶ್, ಜಿಲ್ಲಾ ಕಾರ್ಯದರ್ಶಿ ಕೊಟ್ಟೂರು ರಮೇಶ್, ತಾಲೂಕು ಕೋಶಾಧ್ಯಕ್ಷ ಟಿ.ಗಂಗಣ್ಣ, ತಾಲೂಕು ಸಂಚಾಲಕ ವಿ.ಟಿ.ರಾಜು, ಪ್ರಮುಖರಾದ ಬಿ.ಎಂ.ರುದ್ರಯ್ಯಸ್ವಾಮಿ ಸೇರಿದಂತೆ ರೈತ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌