ಏಪ್ರಿಲ್‌ 10 ರವರೆಗೆ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸಲು ಆಗ್ರಹ

KannadaprabhaNewsNetwork | Published : Apr 5, 2025 12:45 AM

ಸಾರಾಂಶ

ಬಳ್ಳಾರಿ ಹಾಗೂ ವಿಜಯನಗರ ಭಾಗಗಳ ರೈತರ ಹಿತ ದೃಷ್ಟಿಯಿಂದ ಈ ಹಿಂದೆ ತೀರ್ಮಾನಿಸಿದಂತೆ ಎಲ್‌ ಎಲ್‌ ಸಿ ಕಾಲುವೆಗೆ ಏ.10ರತನಕವಾದರೂ ನೀರು ಹರಿಸಬೇಕು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಬಳ್ಳಾರಿ ಹಾಗೂ ವಿಜಯನಗರ ಭಾಗಗಳ ರೈತರ ಹಿತ ದೃಷ್ಟಿಯಿಂದ ಈ ಹಿಂದೆ ತೀರ್ಮಾನಿಸಿದಂತೆ ಎಲ್‌ ಎಲ್‌ ಸಿ ಕಾಲುವೆಗೆ ಏ.10ರತನಕವಾದರೂ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.

ಪಟ್ಟಣದ ಅತಿಥಿಗೃಹ ಆವರಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತರ ಸಭೆಯಲ್ಲಿ ಮಾತನಾಡಿದರು.

ಈ ಹಿಂದೆ ಬೆಳೆಗಳ ಸಂರಕ್ಷಣೆಗಾಗಿ ಏ. 15ರ ತನಕ ನೀರು ಹರಿಸುವಂತೆ ರೈತರ ಪರವಾಗಿ ರಾಜ್ಯ ರೈತ ಸಂಘದಿಂದ ಸಚಿವರು ಹಾಗೂ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಬಳಿಕ 2025ರ ಮಾ.21ರಂದು ಬೆಂಗಳೂರಿನಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಮಕ್ಷಮದಲ್ಲಿ ನಡೆದ ಐಸಿಸಿ ಸಭೆಯಲ್ಲಿ ಏ.10ರತನಕ ಕುಡಿವ ನೀರು, ನಿಂತ ಬೆಳೆಗಳ ಸಂರಕ್ಷಣೆಗೆ 450 ಕ್ಯೂಸೆಕ್ಸ್ ನೀರು ಹರಿಸಲು ನಿರ್ಣಯಿಸಿತ್ತು. 2025ರ ಮಾ.30ರಂದು ಕಲಬುರಗಿ ಆಯುಕ್ತರು ಕುಡಿವ ನೀರು, ನಿಂತ ಬೆಳೆಗಳ ಸಂರಕ್ಷಣೆಗೆ 650 ಕ್ಯೂಸೆಕ್ ನಂತೆ ಏ.5ರತನಕ ಎಲ್‌ಎಲ್‌ಸಿ ಕಾಲುವೆಗೆ ನೀರು ಹರಿಸುವಂತೆ ಸೂಚಿಸಿದ್ದರು. ಏ.2ರಂದು ಸಚಿವ ಶಿವರಾಜ ತಂಗಡಗಿಯವರು ಬಳ್ಳಾರಿ, ವಿಜಯನಗರ ಜಿಲ್ಲೆಗಳ ರೈತರನ್ನು ಕಡೆಗಣಿಸಿ, ರಾಯಚೂರು, ಕೊಪ್ಪಳ ರೈತರಿಗೆ ಅನುಕೂಲವಾಗುವಂತೆ ಎಡದಂಡೆ ಕಾಲುವೆಗೆ ಮಾತ್ರ ಏ.10ರತನಕ 3000 ಕ್ಯೂಸೆಕ್ ನಂತೆ ನೀರು ಹರಿಸುವ ಮಾಹಿತಿ ನೀಡಿದ್ದಾರೆ. ಇದು ಸರ್ಕಾರ ನಮ್ಮ ಭಾಗದ ರೈತರಿಗೆ ತೋರುತ್ತಿರುವ ಮಲತಾಯಿ ಧೋರಣೆಯಾಗಿದೆ. ರೈತರನ್ನು ತಾರತಮ್ಯದಿಂದ ನೋಡುವ ಸಚಿವರ ಮನೋಭಾವ ಸರಿಯಲ್ಲ. ಇವರ ಈ ಉದ್ದಟತನದಿಂದ ನಮ್ಮ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ದೂರವಾಣಿ ಕರೆಗೆ ಸಿಗುತ್ತಿಲ್ಲ. ನೀರು ಹರಿಸುವ ವಿಚಾರದಲ್ಲಿ ರೈತರೆಲ್ಲ ಗೊಂದಲಕ್ಕೀಡಾಗಿದ್ದಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕನಿಷ್ಟ ಏ.10ರತನಕ ಎಲ್.ಎಲ್.ಸಿ.ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ಒಂದು ಎಕರೆಗೆ 50 ಸಾವಿರದಂತೆ ರೈತರಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದರೆಡ್ಡಿ, ಕಂಪ್ಲಿ ನಗರ ಅಧ್ಯಕ್ಷ ತಿಮ್ಮಪ್ಪನಾಯಕ, ತಾಲೂಕು ಅಧ್ಯಕ್ಷ ವಿ.ವೀರೇಶ, ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ, ಪ್ರಮುಖರಾದ ಆದೋನಿ ರಂಗಪ್ಪ, ಟಿ.ಗಂಗಣ್ಣ, ಮುರಾರಿ, ಕಾಗೆ ಈರಣ್ಣ, ಕೆ.ಅಕ್ಬರ್, ಮಹ್ಮದ್ ತೌಶಿಫ್, ಹೊಸಮುನಿರಾಜಪ್ಪ ಇತರರಿದ್ದರು.

Share this article