ಶರಾಬಿ ನದಿ ಸಮೀಪದ ಸ್ಮಶಾನ ಸ್ಥಳಾಂತರಿಸಲು ಆಗ್ರಹ

KannadaprabhaNewsNetwork |  
Published : Nov 17, 2026, 02:15 AM IST
ನೌಜವಾನ್ ಇತ್ತೀಹಾದ್ ಸಮಿತಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಹೊರಹೊಮ್ಮುವ ಹೊಗೆ ಶರಾಬಿ ನದಿಯನ್ನು ದಾಟಿ ಡೊಂಗರಪಳ್ಳಿ ಹಾಗೂ ನದಿಯ ಇನ್ನೊಂದು ದಡದಲ್ಲಿರುವ ಇತರ ಜನವಸತಿ ಪ್ರದೇಶಗಳ ಮನೆಗಳಿಗೆ ವ್ಯಾಪಿಸುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ಆತಂಕ ಉಂಟಾಗಿದೆ.

ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮದ ಸರ್ವೆ ನಂ. 51, ಹಿಸ್ಸಾ ನಂ. 5ರಲ್ಲಿ ಶರಾಬಿ ನದಿಯ ಸಮೀಪ ನಿರ್ಮಿಸಲಾಗಿರುವ ಸ್ಮಶಾನವನ್ನು ತಕ್ಷಣವೇ ಸ್ಥಗಿತಗೊಳಿಸಿ ಸೂಕ್ತ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ನೌಜವಾನ್ ಇತ್ತೀಹಾದ್ ಸಮಿತಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಮನವಿಯಲ್ಲಿ ಡೊಂಗರಪಳ್ಳಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರು ವಾಸವಾಗಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಮಸೀದಿ, ದೇವಾಲಯ, ಶಾಲೆ, ವಸತಿನಿಲಯ ಸೇರಿದಂತೆ ಹಲವು ಸಾರ್ವಜನಿಕ ಬಳಕೆಯ ಸ್ಥಳಗಳಿವೆ. ಸ್ಮಶಾನದ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಅಲ್ಲಿ ನಿರಂತರವಾಗಿ ಅಂತ್ಯಕ್ರಿಯೆಗಳು ನಡೆಯುತ್ತಿವೆ.

ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ಹೊರಹೊಮ್ಮುವ ಹೊಗೆ ಶರಾಬಿ ನದಿಯನ್ನು ದಾಟಿ ಡೊಂಗರಪಳ್ಳಿ ಹಾಗೂ ನದಿಯ ಇನ್ನೊಂದು ದಡದಲ್ಲಿರುವ ಇತರ ಜನವಸತಿ ಪ್ರದೇಶಗಳ ಮನೆಗಳಿಗೆ ವ್ಯಾಪಿಸುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ಆತಂಕ ಉಂಟಾಗಿದೆ.

ಜನವಸತಿ ಪ್ರದೇಶಗಳ ಸಮೀಪ ಇಂತಹ ಸ್ಮಶಾನವನ್ನು ಸ್ಥಾಪಿಸುವ ಮೊದಲು ಸಾರ್ವಜನಿಕ ಆರೋಗ್ಯ, ಪರಿಸರ ಮತ್ತು ಸ್ಥಳದ ಸೂಕ್ತತೆಯನ್ನು ಸಮಗ್ರವಾಗಿ ಪರಿಶೀಲಿಸಬೇಕಾಗಿತ್ತು. ನಮ್ಮ ಆಕ್ಷೇಪಣೆಯು ಯಾವುದೇ ಸಮುದಾಯದ ಧಾರ್ಮಿಕ ನಂಬಿಕೆಗಳು ಅಥವಾ ಅಂತ್ಯಕ್ರಿಯೆಯ ಸಂಪ್ರದಾಯಗಳ ವಿರುದ್ಧವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯರು, ನೌಜವಾನ್ ಇತ್ತೀಹಾದ್ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೃಕ್ಷಮಾತೆ ಡಾ ಸಾಲುಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮ
ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು: ಡಾ.ಮಂತರ್ ಗೌಡ