ಹೊಸಪೇಟೆ; ಹಂಪಿ ಪ್ರಾಧಿಕಾರ ಕಚೇರಿ ಎದುರು ಅಕ್ರಮವಾಗಿ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗುತ್ತಿದ್ದು, ಈ ಕಾಮಗಾರಿಯನ್ನು ನಿಲ್ಲಿಸಿ ಸಂರ್ಪೂಣ ತೆರವುಗೊಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.ಕಮಲಾಪುರದಲ್ಲಿರುವ ಹಂಪಿ ಪ್ರಾಧಿಕಾರ ಕಚೇರಿ ಎದುರು ಆಗಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಕೆಕೆಆರ್‌ಡಿಬಿ ಅನುದಾನದ ಬಳಸಿ ₹50 ಲಕ್ಷ ವೆಚ್ಚದಲ್ಲಿ ಒಂದು ಕೊಠಡಿ ಪ್ರವಾಸಿಗರ ವಿಶ್ರಾಂತಿಗೆ ಹಾಗೂ ಇನ್ನೊಂದು ಕೊಠಡಿ ಪ್ರವಾಸಿಗರ ಶಾಂಪಿಂಗ್‌ಗಾಗಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಟೆಂಡರ್ ಕರೆದು ನೀಡಲು ಆದೇಶಿಸಿದ್ದಾರೆ. ಆದರೆ, ಹಿಂದಿನ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಈಗ ಅಕ್ರಮವಾಗಿ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ದೂರಿದ್ದಾರೆ.
ಬಡವರು, ಕೂಲಿ ಕಾರ್ಮಿಕರಿಗೆ ಅನುಕೂಲ ಆಗಲಿ ಎಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಈಗ ಈ ರೆಸ್ಟೋರೆಂಟ್ ಆರಂಭವಾದರೆ, ಇಂದಿರಾ ಕ್ಯಾಂಟೀನ್ ಗೂ ತೊಂದರೆ ಆಗಲಿದೆ. ಕಮಲಾಪುರ ಬಸ್ ನಿಲ್ದಾಣದಿಂದ ಹೊರ ಬರುವ ಬಸ್‌ಗಳಿಗೂ ತೊಂದರೆ ಆಗಲಿದೆ. ರೆಸ್ಟೋರೆಂಟ್‌ನಿಂದಾಗಿ ಜನಸಂದಣಿ ಉಂಟಾಗಿ ಸಾರ್ವಜನಿಕರಿಗೂ ತೊಂದರೆ ಆಗಲಿದೆ. ರೆಸ್ಟೋರೆಂಟ್ ಮಾಡುವವರು ಸರ್ಕಾರದ ಕಂಪೌಂಡ್ ಕೆಡವಿ, ಶೆಡ್ ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಟೆಂಡರ್ ಕರೆದು, ಪ್ರವಾಸಿಗರ ಅನುಕೂಲಕ್ಕಾಗಿ ಎರಡು ಕೊಠಡಿಗಳನ್ನು ನೀಡಬೇಕು. ಈ ಅಕ್ರಮ ರೆಸ್ಟೋರೆಂಟ್ ನಿರ್ಮಾಣ ಕಾಮಗಾರಿಗೆ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಭರವಸೆ ನೀಡಿದರು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಶಿವಕುಮಾರ, ರಾಜು ಗುಜ್ಜಲ, ಬಸವರಾಜ ಇದ್ದರು.