ರಾಷ್ಟ್ರೀಯ ಹೆದ್ದಾರಿ ವಿಭಜಕ ತೆರವುಗೊಳಿಸಲು ಆಗ್ರಹ

KannadaprabhaNewsNetwork | Published : Mar 5, 2025 12:34 AM

ಸಾರಾಂಶ

ಈ ಮೊದಲು ಹೆದ್ದಾರಿ ವಿಭಜಕಗಳಿಲ್ಲದೆ ಪುರಲಕ್ಕಿಬೇಣಕ್ಕೆ ಹೋಗಲು ಅವಕಾಶವಿತ್ತು.ಆದರೆ ಒಂದೆರಡು ಅಪಘಾತ ನೆಪದಲ್ಲಿ ಈ ರಸ್ತೆ ವಿಭಜಕ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ

ಅಂಕೋಲಾ: ಪುರಸಭೆ ವ್ಯಾಪ್ತಿಯ ಪುರಲಕ್ಕಿಬೇಣದ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿಯ ಪಿಕೋಕ್ ಹೊಟೇಲ್ ಹತ್ತಿರದ ವಿಭಜಕ ತೆರವುಗೊಳಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಸಲ್ಲಿಸಿದರು.

ಪುರಲಕ್ಕಿಬೇಣ ರಸ್ತೆ ಹಾಗೂ ಸುಂದರನಾರಾಯಣ ರಸ್ತೆ ಮಧ್ಯದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ವಿಭಜಕದಿಂದ ನಾಗರಿಕರು, ವಾಹನಗಳ ತಿರುಗಾಟಕ್ಕೆ ತೊಂದರೆಯಾಗುತ್ತಿದ್ದು ಈ ವಿಭಜಕ ತೆರವುಗೊಳಿಸಬೇಕೆಂದು ನಾಗರಿಕರು ಆಗ್ರಹಿಸಿದರು.

ಈ ಸಮಯದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ನಾಗರಿಕರ ಸಮಸ್ಯೆ ಬೆಂಬಲಿಸಿ ಮಾತನಾಡಿ, ಪುರಲಕ್ಕಿಬೇಣದಲ್ಲಿ ಹೆಚ್ಚಿನ ಸಂಖ್ಯೆಯ ದಲಿತ ಸಮುದಾಯದವರು ಹಾಗೂ ನಿವೃತ್ತ ನೌಕರರು ವಾಸಿಸುತ್ತಿದ್ದಾರೆ.ಇವರೆಲ್ಲ ಅಂಕೋಲಾ ನಗರಕ್ಕೆ 1 ಕಿಮೀ ವರೆಗೆ ಸುತ್ತುವರೆದು ಹೋಗಬೇಕಾಗುತ್ತದೆ. ದಿನನಿತ್ಯ ಶಾಲೆಗೆ ಹೋಗುವ ಮಕ್ಕಳು ಅಂಕೋಲಾ ನಗರವನ್ನೇ ಅವಲಂಭಿಸಿರುವುದರಿಂದ ಅವರಿಗೆ ತೊಂದರೆಯಾಗುತ್ತಲಿದೆ. ಅಂಕೋಲಾ ಜನರು ವಿಶೇಷವಾಗಿ ಅಗ್ನಿಶಾಮಕ ದಳದ ಕಚೇರಿ ಹಾಗೂ ರಾಜ್ಯ ವಿದ್ಯುತ್ ಮಂಡಳಿ ಕಚೇರಿಗೆ ತೆರಳಲು ಅನಾನುಕೂಲವಾಗುತ್ತದೆ. ಪುರಲಕ್ಕಿಬೇಣ ನಾಗರಿಕರು ತುರ್ತು ಚಿಕಿತ್ಸೆಗೆ ಹೋಗಲು ಅಂಡರ್ ಬ್ರಿಡ್ಜ್ ದಾಟಿ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.

ಈ ಮೊದಲು ಹೆದ್ದಾರಿ ವಿಭಜಕಗಳಿಲ್ಲದೆ ಪುರಲಕ್ಕಿಬೇಣಕ್ಕೆ ಹೋಗಲು ಅವಕಾಶವಿತ್ತು.ಆದರೆ ಒಂದೆರಡು ಅಪಘಾತ ನೆಪದಲ್ಲಿ ಈ ರಸ್ತೆ ವಿಭಜಕ ಹಾಕಿ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಈ ಸಮಸ್ಯೆ ನಿವಾರಿಸಲು ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಸಾಕಷ್ಟು ಮನವಿ ಅರ್ಪಿಸಿದರೂ ಯಾವ ಪ್ರಯೋಜನವಾಗಿಲ್ಲವೆಂದು ನಾಗರಿಕರು ಕಳವಳ ವ್ಯಕ್ತಪಡಿಸಿದರು.

ಸುತ್ತು ಹಾಕಿ ಹೋಗುವದರಿಂದ ಪುರಲಕ್ಕಿಬೇಣದ ಜನರು ಹಣ ಹಾಗೂ ಸಮಯ ಅಪವ್ಯಯವಾಗುತ್ತಿದೆ ಎಂದು ಕಾಗೇರಿಯವರಿಗೆ ಅರ್ಪಿಸಿದ ಮನವಿಯಲ್ಲಿ ಹೇಳಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಹೆದ್ದಾರಿಯ ಪ್ರಮುಖರೊಂದಿಗೆ ಮಾತನಾಡಿ ಈ ಸಮಸ್ಯೆ ಬಗೆಹರಿಸುವದಾಗಿ ಆಶ್ವಾಸನೆ ನೀಡಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ರಾಮಕೃಷ್ಣ ಗುಂದಿಯವರ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಪುರಲಕ್ಕಿಬೇಣದ ನೂರಾರೂ ನಾಗರಿಕರು ಉಪಸ್ಥಿತರಿದ್ದರು.

Share this article