ಸವಣೂರು: 7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಆಗಿರುವ ಅರ್ಥಿಕ ನಷ್ಟ ಸರಿಪಡಿಸುವಂತೆ ಕರ್ನಾಟಕ ನಿವೃತ್ತ ನೌಕರರ ವೇದಿಕೆ, ಕೇಂದ್ರ ಸಮಿತಿ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಾಗೂ ಹುತಾತ್ಮರ ದಿನಾಚರಣೆ ಸಂದರ್ಭದಲ್ಲಿ ಸತ್ಯಾಗ್ರಹ ನಡೆಸಿ, ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರು ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಒಳಗೊಂಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಒಂದು ವಾರದೊಳಗೆ ದಿನಾಂಕ ನಿಗದಿಪಡಿಸಿ ಸಭೆ ಆಯೋಜನೆ ಮಾಡಬೇಕು. 25 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಷ್ಠಾನದಲ್ಲಿ ನಿವೃತ್ತಿ ಉಪಲಬ್ಧಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವಾಗಿದೆ. ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿ ನೌಕರರಂತೆ 2022 ಜುಲೈ 1ರಿಂದ ಪಡೆಯಬೇಕಿದ್ದ ನಿವೃತ್ತಿ ವೇತನದ ವ್ಯತ್ಯಾಸದ ಬದಲಾಗಿ ನಾವು ಕೇಳುತ್ತಿರುವುದು 7ನೇ ವೇತನ ಆಯೋಗದ ವರದಿಯಂತೆ ಪರಿಷ್ಕೃತ ವೇತನದ ಮೇಲೆ ನಿವೃತ್ತಿ ಆರ್ಥಿಕ ಸೌಲಭ್ಯಗಳಾದ ಡಿಸಿಆರ್‌ಜಿ, ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯಗಳ ಲೆಕ್ಕಾಚಾರದ ವ್ಯತ್ಯಾಸದ ಮೊತ್ತವನ್ನು ಒಂದೆ ಸಾರಿ ನೀಡಬೇಕು. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಮನವಿ ಸ್ವೀಕರಿಸಿದ್ದರು. ಅಧಿವೇಶನ ಮುಗಿದ ಮೇಲೆ ಬೆಂಗಳೂರಿನಲ್ಲಿ ಸರ್ಕಾರದ ಆರ್ಥಿಕ ಕಾರ್ಯದರ್ಶಿ ಪಿ.ಸಿ. ಜಾಫರ್ ಅವರೊಂದಿಗೆ ಸಭೆ ಆಯೋಜಿಸಿ, ನಿಮ್ಮ ಅಹವಾಲುಗಳನ್ನು ತಿಳಿಸಲಾಗುವುದು ಎಂದು ಆಗ ಭರವಸೆ ನೀಡಿದ್ದರು. ಆದರೆ, ಇಂದಿನವರಿಗೂ ಸಭೆ ಆಯೋಜನೆ ಮಾಡದಿರುವುದು ನಿವೃತ್ತ ನೌಕರರಿಗೆ ಬೇಸರವನ್ನುಂಟು ಮಾಡಿದೆ. ಆದ್ದರಿಂದ, ಒಂದು ವಾರದೊಳಗಾಗಿ ಸಭೆ ಆಯೋಜನೆ ಮಾಡಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಸ್.ಜಿ. ಕೋರಿ, ಎಸ್.ಟಿ. ಮೆಳ್ಳಲ್ಳಿ, ವೈ.ಜಿ. ಹೆರಕುಣಿ, ಎಸ್.ಎಂ. ಕೊರಡೂರ, ಬಾನುಮತಿ, ಗುಳಗುಂಡಿ, ಎಚ್.ವಿ. ಪಾಟೀಲ, ದಾಮೋದರ, ಕೆ.ಡಿ. ಚಾರಿ, ಎಸ್.ಎಸ್. ಗುದಗಿ ಹಾಗೂ ಇತರರು ಇದ್ದರು.