ಹೂವಿನಹಡಗಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಇಂಗ್ಲಿಷ್ ಜ್ಞಾನ ಮುಖ್ಯವಾಗಿದೆ. ಸ್ಪರ್ಧಾತ್ಮಕ ಜಗತ್ತಿಗಾಗಿ ಇಂಗ್ಲಿಷ್ ಜ್ಞಾನ ಸಂಪಾದಿಸಿಕೊಳ್ಳಬೇಕೆಂದು ಪ್ರಾಚಾರ್ಯ ಪ್ರಕಾಶ್ ಕಲ್ಲನಗೌಡ್ರ ಹೇಳಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆಗೆ ಒಳಗಾಗದೇ ಉನ್ನತ ಹುದ್ದೆಗೆ ಏರುವ ಛಲ ಹೊಂದಬೇಕು. ಉತ್ತಮ ಫಲಿತಾಂಶ ಪಡೆಯುವ ಮೂಲಕ ಹೆತ್ತವರಿಗೆ, ಕಾಲೇಜಿಗೆ ಕೀರ್ತಿ ತನ್ನಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಗಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಈಶ್ವರಪ್ಪ, ಗ್ರಾಮೀಣ ಕಾಲೇಜುಗಳಲ್ಲಿನ ಫಲಿತಾಂಶ ಸುಧಾರಣೆಯ ಕ್ರಮವಾಗಿ ಈ ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರ ಆಯೋಜಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಪ್ರತಿ ವರ್ಷದಂತೆ ಈ ವರ್ಷವೂ ಮೂರು ಕಾಲೇಜಿನಲ್ಲಿ ಕಾರ್ಯಾಗಾರ ಆಯೋಜಿಸಿದ್ದು, ವಾರ್ಷಿಕ ಪರೀಕ್ಷೆಗೆ ತಯಾರಾಗಲು ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿವೆ ಎಂದರು.
ಕಾರ್ಯಾಗಾರದಲ್ಲಿ ಉಪನ್ಯಾಸಕರಾದ ಎಂ.ರೇವಣಸಿದ್ಧಪ್ಪ, ಪರಶುರಾಮ ನಾಗೋಜಿ, ಕೆ.ಶಬೀನ, ಸುಮಾ ಶಾಕಾರದ, ತಾರಾಸಿಂಗ್, ಮೆಹಬೂಬಸಾಬ್, ಪಂಪಣ್ಣ, ರಾಮಣ್ಣ ಮತ್ತು ಹೊಳಲು, ಹಿರೇಹಡಗಲಿ ಹಾಗೂ ಮಾಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಮ್ಮೂರಿನ ಕಾಲೇಜಿನಲ್ಲಿ ಜರುಗುವ ಕಾರ್ಯಾಗಾರಕ್ಕೆ ತಲುಪಲು ಬೇರೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು, ಬಸ್ ಸಲುವಾಗಿ ಮನವಿ ಸಲ್ಲಿಸಿದ್ದೆವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ನಮ್ಮ ಶ್ರಮ ಸಾರ್ಥಕ ಎಂದು ಮಾಗಳದ ಶಿಕ್ಷಣಪ್ರೇಮಿ ವಿಶ್ವಪಾಲ್ ಕೆಂಪಕಟ್ಟಿ ತಿಳಿಸಿದರು.