ಬೆಳ್ತಂಗಡಿ: ಭಾರತದ ಅತೀ ಶ್ರೀಮಂತ ದೇವಸ್ಥಾನವಾಗಿರುವ ಕೇರಳದ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ಸ್ವಾಮಿಯ ಮಹಾಪ್ರಧಾನ ಅರ್ಚಕ (ಪೆರಿಯ ನಂಬಿ)ರಾಗಿ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ನೇಮಕಗೊಂಡಿದ್ದಾರೆ. ಮಹಾಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುವ ಭಾಗ್ಯ ದೊರಕುವುದು ಅಂದರೆ ವೈಕುಂಠದಲ್ಲಿ ದೇವರನ್ನ ಸ್ವತಃ ಪೂಜಿಸಿದ ಗರಿಮೆ. ಮಹಾ ಪ್ರಧಾನ ಅರ್ಚಕರೆಂದರೆ ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ (ಛತ್ರಿ) ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಮಹಾ ಅರ್ಚಕ ಸ್ಥಾನವನ್ನು ಈವರೆಗೆ ಅತೀ ಸಣ್ಣ ವಯಸ್ಸಿನಲ್ಲಿ ಪಡೆದವರು ಸತ್ಯನಾರಾಯಣ ತೋಡ್ತಿಲ್ಲಾಯ.
ಅರ್ಚಕರಾಗಿ ಸೇರಿದ ಆರೇ ತಿಂಗಳಲ್ಲಿ ಮಹತ್ತರವಾದ ಗೌರವ ಇರುವ ಮಹಾ ಪ್ರಧಾನ ಅರ್ಚಕ ಸ್ಥಾನ (ಪೆರಿಯ ನಂಬಿ) ಪ್ರಾಪ್ತಿಯಾಗಿದೆ. ಈ ಹುದ್ದೆ ಅಕ್ಕರೆ ದೇಶಿ (ಕೊಕ್ಕಡದ 8 ಮನೆತನ) ಹಾಗೂ ಇಕ್ಕರೆ ದೇಶಿ ಕೇರಳದ 4 ಮನೆತನದ ಒಳಗಾಗಿ ಬರುವಂತಹದಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿ ರಾಜೇಂದ್ರ ಅರೆಮನೆತ್ತಾಯ (ಅಕ್ಕರೆದೇಶಿ) ಅವರು ಒಂದು ವರ್ಷ ನಾಲ್ಕು ತಿಂಗಳು ಸೇವೆ ಸಲ್ಲಿಸಿ ಹುದ್ದೆ ತ್ಯಜಿಸಿದ್ದರು.
ಈ ಹುದ್ದೆಗೇರಿದ ಬಳಿಕ ಗೃಹಸ್ಥಾಶ್ರಮ ತೊರೆದು ಸನ್ಯಾಸಿಯಂತೆ ಇರಬೇಕು. ಜತೆಗೆ ದೇವರ ಯಾವುದೇ ಉತ್ಸವಗಳಿಗೆ ಇವರದೇ ಪ್ರಧಾನ ಪೌರೋಹಿತ್ಯ ಸ್ಥಾನವಾಗಿರುತ್ತದೆ.