ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ 53 ಕುಷ್ಠರೋಗ ಪ್ರಕರಣಗಳು ಇವೆ. ಇದಲ್ಲದೇ ಏಪ್ರಿಲ್‌ನಿಂದ ಇಲ್ಲಿಯವರೆಗೂ 32 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಡಿಎಚ್‌ಒ ಡಾ.ಕೆ.ಎಸ್.ನಟರಾಜ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ, ಭಾರತೀಯ ವೈದ್ಯಕೀಯ ಸಂಘ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.ನಮ್ಮ ದೇಶ ತುಂಬು ಕುಟುಂಬ ಹೊಂದಿರುವ ದೇಶವಾಗಿದೆ. ಇದರಿಂದ ಕುಷ್ಠರೋಗ ಹರಡುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ನಾವು ಕೆಮ್ಮುವಾಗ, ಸೀನುವಾಗ ಎಚ್ಚರಿಕೆ ವಹಿಸಬೇಕು. ಇದಲ್ಲದೇ ದೇಹದಲ್ಲಿ ಬಿಳಿ ಮಚ್ಚೆಗಳು ಕಂಡುಬಂದಲ್ಲಿ ನಿರ್ಲಕ್ಷ್ಯತನ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಶಿಕಾರಿಪುರ ಅಲ್ಲದೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಕುಷ್ಠರೋಗ ಪ್ರಕರಣಗಳು ಕಂಡುಬಂದಿವೆ. ಆದರೆ ಪ್ರಮಾಣ ಕಡಿಮೆ ಇದೆ. ಜಿಲ್ಲೆಯ ಯಾವ ತಾಲೂಕು ಕುಷ್ಠರೋಗದಿಂದ ಹೊರತಾಗಿಲ್ಲ. ಇದನ್ನು ತೊಡೆದು ಹಾಕಲು ಆರೋಗ್ಯ ಇಲಾಖೆ ಪಣತೊಟ್ಟಿದ್ದು, ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ ಎಂದರು. ಮೆಗ್ಗನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಡಿ.ತಿಮ್ಮಪ್ಪ ಮಾತನಾಡಿ, ನಾವು ಸಣ್ಣ ಮಕ್ಕಳಿದ್ದಾಗ ನಗರದ ಬಸ್‌ಸ್ಟ್ಯಾಂಡ್, ದೇವಸ್ಥಾನ ಒಳಗೊಂಡಂತೆ ಅನೇಕ ಕಡೆ ಕುಷ್ಠರೋಗಿಗಳನ್ನು ಕಾಣುತ್ತಿದ್ದೆವು. ಜನರು ಅವರನ್ನು ಮುಟ್ಟಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಈ ಕಾಯಿಲೆಯಿಂದ ಅವರು ವೈವಾಹಿಕ ಜೀವನದಿಂದಲೇ ದೂರ ಉಳಿದಿದ್ದರು. ಇಡೀ ಸಮಾಜವೇ ಈ ರೋಗವನ್ನು ಅನಿಷ್ಟವೆಂಬಂತೆ ಕಾಣುತ್ತಿತ್ತು. ಏಸುಕ್ರಿಸ್ತ, ಭಗವಾನ್ ಬುದ್ಧ, ಮಹಾತ್ಮ ಗಾಂಧಿ, ಮದರ್ ತೆರೇಸಾ ಇವರೆಲ್ಲಾ ಕುಷ್ಠರೋಗವನ್ನು ಅನಿಷ್ಟವೆಂದು ಕಾಣದೆ ಸೇವೆಯನ್ನು ಮಾಡಿದವರು. ಕುಷ್ಠರೋಗವು ಸ್ವರ್ಶದಿಂದ ಬರುವುದಿಲ್ಲ ಎಂದು ಅರಿತಿದ್ದ ಈ ಮಹಾನೀಯರು ತಮ್ಮ ಬದುಕಿನುದ್ದಕ್ಕೂ ಈ ರೋಗಿಗಳ ಶುಶ್ರೂಷೆ ಮಾಡುತ್ತಾ ಜೀವನ ನಡೆಸಿದರು. ಕುಷ್ಠರೋಗವನ್ನು ಹೋಗಲಾಡಿಸಬೇಕೆಂದು ಶ್ರಮಿಸುತ್ತಿರುವ ನಾವೆಲ್ಲರು ಇವರ ಆದರ್ಶವನ್ನು ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಬೇಕು ಎಂದರು.ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಗಾಂಧೀಜಿಯವರ ಆಂದೋಲನ ನೆನೆಪಿಸುತ್ತಿದೆ. ಇತ್ತೀಚಿಗೆ ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿದೆ. ಈ ರೋಗ ಪಾಪ, ಪುಣ್ಯದ ಪಿಡುಗು ಎಂದು ಭಾವಿಸಲಾಗುತ್ತಿದೆ. ಅಂತಹ ತಪ್ಪು ಕಲ್ಪನೆಯನ್ನು ಹೊಗಲಾಡಿಸೋಣ. ಅದಕ್ಕೆ ಇಂತಹ ಅಭಿಯಾನಗಳು ಮುಖ್ಯವಾಗಿದೆ ಎಂದರು. ಜಿಲ್ಲಾ ಕುಷ್ಠರೋಗ ನಿವಾರಣಾ ಕಾರ್ಯಕ್ರಮಧಿಕಾರಿ ಡಾ.ಎಸ್.ಕೆ. ಕಿರಣ್ ಮಾತನಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ “ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ - 2025” ಕಾರ್ಯಕ್ರಮದ ಪೋಸ್ಟರ್ ಹಾಗೂ ಕುಷ್ಠರೋಗ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಕುಷ್ಠರೊಗ ಜಾಗೃತಿ ಕುರಿತು ಸೈಕಲ್ ಜಾಥಾ ಕೈಗೊಳ್ಳಲಾಯಿತು. ಕುಷ್ಠರೋಗ ಜಾಗೃತಿ ಆಂದೋಲನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಅಧಿಕಾರಿಗಳು, ಚರ್ಮರೋಗ ತಜ್ಞ ಡಾ.ದಾದಾಪೀರ್, ಆಶಾ ಕಾರ್ಯಕರ್ತೆಯರು ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.