ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಅನ್ನದಾಸೋಹದ ಸಲುವಾಗಿ ದವಸ-ಧಾನ್ಯಗಳು ಹರಿದು ಬರುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.

ಶುಕ್ರವಾರ ಶುಖಮುನಿ ಶ್ರೀಗಳ ನಾಲ್ಕನೇ ದಿನದ ಪಲ್ಲಕ್ಕಿ ಉತ್ಸವ ಬೆಳಗ್ಗೆ ಪ್ರಾರಂಭವಾಗಿ, ನೇರವಾಗಿ ಎರಡು ಕಿಲೋಮೀಟರ್‌ ದೂರದಲ್ಲಿರುವ ಗುಡಿಕಲಕೇರಿ ಹಾಗೂ ನಡುವಲಕೊಪ್ಪ ಗ್ರಾಮಗಳಿಗೆ ಸಂಚರಿಸಿತು.

ಗ್ರಾಮದ ಭಕ್ತರು ಡೊಳ್ಳು ವಾದ್ಯಗಳೊಂದಿಗೆ ಬರಮಾಡಿಕೊಂಡು, ಗ್ರಾಮಗಳಲ್ಲಿ ಸುತ್ತಾಡಿಸಿ, ವಿವಿಧ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಕೈಗೊಂಡರು. ಆನಂತರ ಮಧ್ಯಾಹ್ನ ಪಲ್ಲಕ್ಕಿಯ ಜತೆಗೆ ಆಗಮಿಸಿದ ನೂರಾರು ಭಕ್ತರು ಶಿರಾ, ಅನ್ನದಾಸೋಹ ಮಾಡಿಸಿದರು.

ಕೇಸೂರು ಗ್ರಾಪಂ ಕಾರ್ಯಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಹೊತ್ತಿಗೆ ಭಾಜಾ ಭಜಂತ್ರಿಗಳು ಹಾಗೂ ಡೊಳ್ಳು ವಾದ್ಯಮೇಳಗಳೊಂದಿಗೆ ದೋಟಿಹಾಳ ಶ್ರೀಮಠದತ್ತ ಪಲ್ಲಕ್ಕಿ ಮುಖಮಾಡಿತು. ನೂರಾರು ಮಹಿಳೆಯರು ಕಳಶ ಕೈಗನ್ನಡಿಯೊಂದಿಗೆ ಹೆಜ್ಜೆ ಹಾಕಿದರು. ಹಾಡುಗಳಿಗೆ, ಭಜಂತ್ರಿ ವಾದ್ಯಗಳಿಗೆ ಯುವಕರು ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ನಡೆದರು.

ಭಕ್ತರು ಮಠಕ್ಕೆ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್‌ಗಳ ಮೂಲಕ ದಾಸೋಹ ಸೇವೆ ಸಮರ್ಪಣೆ ಮಾಡಿದರು.


ಪ್ರತಿ ವರ್ಷದಂತೆ ಈ ವರ್ಷವೂ ಸಹಿತ ನಮ್ಮ ಗುಡಿಕಲಕೇರಿ, ನಡುವಲಕೊಪ್ಪ ಗ್ರಾಮದಿಂದ ಅಕ್ಕಿ, ಬೆಲ್ಲ, ಜೋಳ, ರವಾ ಸೇರಿದಂತೆ ಅನೇಕ ದವಸ-ಧಾನ್ಯಗಳನ್ನು ಮಠಕ್ಕೆ ಸಮರ್ಪಣೆ ಮಾಡಲಾಗಿದೆ ಎಂದು ಗುಡಿಕಲಕೇರಿ ನಿವಾಸಿ ಅಮರೇಶ ಗೋನಾಳ ತಿಳಿಸಿದ್ದಾರೆ.