ಶಿಗ್ಗಾಂವಿ:ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಟಕಾ, ಇಸ್ಪೀಟ್, ಅಕ್ರಮ ಗಣಿಗಾರಿಕೆ, ಬೀಡಿ ಅಂಗಡಿಯಲ್ಲಿ ಮದ್ಯ ಮಾರಾಟ ಹಾಗೂ ಇನ್ನೂ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ಯಾವ ಭಯ ಭೀತಿ ಇಲ್ಲದೆ ನಡೆಯುತ್ತಿವೆ. ಇದರಿಂದ ನಾಗರಿಕರು ಹಿಡಿ ಶಾಪವನ್ನು ಹಾಕುವಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ ಆರೋಪಿಸಿದ್ದಾರೆ.ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಲ್ಲೆಂದರಲ್ಲಿ ಮಟಕಾ ದಂಧೆ ಮಿತಿಮೀರಿ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ. ತಪ್ಪು ಮಾಡುವವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದರಿಂದ ಕೂಲಿ ಕಾರ್ಮಿಕರು, ನಿರುದ್ಯೋಗಿ ಯುವಕರು, ತಮಗಿರುವ ಕೆಲಸ ಕಾರ‍್ಯಗಳನ್ನೆಲ್ಲ ಬಿಟ್ಟು ಜೂಜು, ಮಟಕಾ ದಾಸರಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬರುವಂತಾಗಿದ್ದು, ತಕ್ಷಣವಾಗಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.ಎಲ್ಲೆಂದರಲ್ಲಿ ಅರಣ್ಯ ಪ್ರದೇಶ ಹಾಗೂ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಇಸ್ಪೀಟ್ ಆಟವು ರಾಜಾರೋಷವಾಗಿ ನಡೆಯುತ್ತಲೇ ಇವೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುವುದರಿಂದ ಇಂದು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದವರು ಸಾಕಷ್ಟು ಪ್ರಮಾಣದಲ್ಲಿ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಇಂತಹ ಚಟುವಟಿಕೆಗಳಿಗೆ ದಾಸರಾಗಿ ಇದ್ದ ಆಸ್ತಿಯನ್ನು ಮಾರಾಟ ಮಾಡಿ ಇದರಿಂದ ಕೃಷಿ ಮಾಡುವ ರೈತ ಕುಟುಂಬಗಳು ಬೀದಿಪಾಲಾಗುವಂತಾಗಿದೆ. ಇಂಥವುಗಳನ್ನು ತಕ್ಷಣ ತಡೆಗಟ್ಟದಿದ್ದರೆ ತಾಲೂಕಿನಾದ್ಯಂತ ಉಗ್ರ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಕಳಪೆ ಮದ್ಯ ಮಾರಾಟ:
ಗ್ರಾಮೀಣ ಪ್ರದೇಶ, ಪಟ್ಟಣದ ಪ್ರದೇಶಗಳಲ್ಲಿ ಅಕ್ರಮವಾಗಿ ಕಳಪೆ ಮಟ್ಟದ ಮದ್ಯ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದರೂ ಯಾವುದೇ ಕ್ರಮಕ್ಕೆ ಮುಂದಾಗಿರುವದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಸಂಬಂಧಿಸಿದ ಅಬಕಾರಿ ಇಲಾಖಾಧಿಕಾರಿಯಾಗಲಿ, ಪೊಲೀಸ್ ಇಲಾಖಾಧಿಕಾರಿಗಳು ಜಾಣ ಕುರುಡುತನವನ್ನು ಪ್ರದರ್ಶನ ಮಾಡುತ್ತಿರುವುದು ನಾಗರಿಕರಲ್ಲಿ ಸಂಶಯಕ್ಕೆಡೆ ಮಾಡಿಕೊಟ್ಟಂತಾಗಿದೆ. ಅಕ್ರಮವಾಗಿ ಜಂಬಿಟ್ಟಿಗೆಯನ್ನು ಗಣಿಗಾರಿಕೆ ಮಾಡುತ್ತಿದ್ದರೂ ಕಂದಾಯ ಅಧಿಕಾರಿಗಳಾಗಲಿ, ಗಣಿ ಮತ್ತು ಭೂ ಇಲಾಖೆ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ತಡೆಗಟ್ಟುವ ಯಾವ ಗೋಜಿಗೂ ಹೋಗಿಲ್ಲ. ಎಲ್ಲೆಂದರಲ್ಲಿ ತೋಡಿ ಬಿಡುವ ತಗ್ಗುಗಳಿಂದ ಕೃಷಿ ಕೆಲಸಕ್ಕೆ ತೊಂದರೆಯಾಗಿ, ಮಳೆಗಾಲದಲ್ಲಿ ಗುಂಡಿ ನೀರು ತುಂಬಿಕೊಂಡರೆ ದನಕರು, ಜನರ ಜೀವ ಹಾನಿಯಾಗುವ ಆತಂಕ ನಿರ‍್ಮಾಣವಾಗಿದೆ ಇದಕ್ಕೆ ಕೊನೆಯಾಗಬೇಕು.ಮಮದಾಪೂರ ಗ್ರಾಮದಲ್ಲಿ ಮನೆಗಳ ಹಕ್ಕು ಪತ್ರವಿಲ್ಲದೆ ಸಾಕಷ್ಟು ವರ್ಷಗಳಿಂದ ಮನೆಗಳ ಸ್ವಾತಂತ್ರ್ಯವಾಗಿ ಇಲ್ಲದೆ ಯಾವುದೇ ಬ್ಯಾಂಕ್ ಸಾಲ ಹಾಗೂ ವಿವಿಧ ಯೋಜನೆಗಳನ್ನು ಪಡೆಯಲು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದರೆ ನೂರಾರು ಮನೆಗಳ ಇ ಸ್ವತ್ತು ಆಗುವ ಕನಸು ಹೊಂದಿದ ಗ್ರಾಮವು ಇನ್ನೂವರೆಗೂ ಕನಸಾಗಿಯೇ ಉಳಿಯುವಂತಾಗಿದೆ. ಇದರಂತೆ ತಾಲೂಕಿನಲ್ಲಿ ಹಲವಾರು ಗ್ರಾಮಗಳಲ್ಲಿ ಇಂತಹ ವ್ಯವಸ್ಥೆಯಿಂದ ಕೂಡಿದರೂ ಗ್ರಾಮ ಪಂಚಾಯತಿ ಹಾಗೂ ಕಂದಾಯ ಇಲಾಖೆಯು ತಾಂತ್ರಿಕ ದೋಷದಿಂದ ಆಗುತ್ತಿದೆ ಎಂದು ಮಮದಾಪುರ ಗ್ರಾಮಸ್ಥ ಖಿಮ್ಮಣ್ಣಾ ಚವ್ಹಾಣ ಆರೋಪಿಸಿದರು.