ಮುಳಗುಂದ: ಪಟ್ಟಣದಿಂದ ಹರ್ತಿ ಸಂಪರ್ಕಿಸುವ ನಮ್ಮ ಹೊಲ ನಮ್ಮ ರಸ್ತೆಯ ಮಾರ್ಗವಾಗಿ ಟಿಪ್ಪರ್ ಸೇರಿದಂತೆ ಭಾರಿ ಗಾತ್ರದ ವಾಹನಗಳು ಒವರ್ ಲೋಡ್ ತುಂಬಿಕೊಂಡು ಸಂಚರಿಸುವುದರಿಂದ ರಸ್ತೆ ಡಾಂಬರ್ ಕಿತ್ತು ಹದಗೆಟ್ಟು ಹೋಗಿದೆ. ಇದರಿಂದ ಆಕ್ರೋಶಗೊಂಡ ರೈತರು ಸೆರಂಟಿಕಾ ಪವನ್ ವಿದ್ಯುತ್ ಕಂಪನಿಯ ಭಾರಿ ಗಾತ್ರದ ವಾಹನ ಸೇರಿದಂತೆ ಇತರೆ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತು, ದನಕರುಗಳು ಈ ಮಾರ್ಗದಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ರೈತರು, ದನಕರುಗಳು ಸಂಚರಿಸುವುದಕ್ಕೆ ರಸ್ತೆ ನಿರ್ಮಾಣ ಮಾಡಿದ್ದು, ಈ ನಮ್ಮ ಹೊಲ ನಮ್ಮ ರಸ್ತೆಯ ಸಾಮರ್ಥ್ಯ ಮೀರಿ 70- 80 ಟನ್ ಭಾರದ ವಾಹನಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಸಂಚರಿಸಲು ಇವರಿಗೆ ಯಾರು ಪರವಾನಗಿ ಕೊಟ್ಟಿದ್ದು? ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯ ಅಕ್ಕಪಕ್ಕದ ಹೊಲಗಳ ರೈತರು ಸೇರಿ ಈ ಹಿಂದೆಯೇ ಈ ಮಾರ್ಗದಲ್ಲಿ ಒವರ್ ಲೋಡ್ ಹಾಕಿಕೊಂಡು ಸಂಚರಿಸಬೇಡಿ ಎಂದು ತಾಕೀತು ಮಾಡಿಲಾಗಿತ್ತು. ಆದರೆ, ರೈತರ ಮಾತಿಗೆ ಕಿವಿಗೊಡದೆ ಪವನ ವಿದ್ಯುತ್ ಕಂಪನಿಯ ವಾಹನಗಳು ಹಗಲು- ರಾತ್ರಿ ಎನ್ನದೇ ಸಂಚರಿಸುವುದನ್ನು ಕಂಡ ರೈತರು ವಾಹನಗಳನ್ನ ತಡೆದು ಕೆಲಕಾಲ ಪ್ರತಿಭಟಿಸಿದರು.ಈ ವೇಳೆ ರೈತರಾದ ಮಂಜುನಾಥ ಬಾತಾಖಾನಿ, ಜಗದೀಶ ಬಟ್ಟೂರ, ಸಂಗಮೇಶ ಮಟ್ಟಿ, ಗಂಗಾಧರ ಬಂದಕ್ಕನವರ, ಯಲ್ಲಪ್ಪ ಕಾಗಿ, ವಿರೂಪಾಕ್ಷಪ್ಪ ಕಣವಿ, ಮಲ್ಲಪ್ಪ ಭದ್ರಣ್ಣವರ ಸೇರಿದಂತೆ ಕಣವಿ, ಮುಳಗುಂದ ರೈತರು ಇದ್ದರು.