-ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗೆ ಮನವಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ನಿರ್ಬಂಧಿಸುವಂತೆ ರೋಟರಿ ಕಾಫಿ ಲ್ಯಾಂಡ್ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ ಅವರನ್ನು ಭೇಟಿ ಮಾಡಿದ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕೊರೋನಾ ಮಹಾಮಾರಿಯಿಂದ ಕಳೆದ ಮೂರು ಬಾರಿ ದೇಶ ಮತ್ತು ರಾಜ್ಯದಲ್ಲಿ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲೂ ಸಹಸ್ರಾರು ಸಂಖ್ಯೆ ಸಾವು ನೋವುಗಳಾಗಿ, ಅನೇಕರು ಹೆತ್ತವರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದರು.ಕೊರೋನಾ ಮತ್ತೊಮ್ಮೆ ಕೇರಳದಲ್ಲಿ ಕಾಣಿಸಿಕೊಂಡಿದ್ದು, ಇದು ವ್ಯಾಪಕವಾಗಿ ಸಾವು ನೋವು ಗಳಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಆಗಮಿಸುವ ವಿಶೇಷವಾಗಿ ಕೇರಳದ ಪ್ರವಾಸಿಗರನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಕ್ರಿಸ್ಮಸ್ ಮತ್ತು ನೂತನ ವರ್ಷದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಯಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಅದು ಕೊರೋನಾ ಸೋಂಕು ಹರಡಲು ಕಾರಣ. ಹಾಗಾಗಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಬೇಕು. ಹೊರ ರಾಜ್ಯಗಳಿಗೆ ತೆರಳಿ ಹಿಂತಿರುಗುವ ಜಿಲ್ಲೆಯ ಜನರನ್ನು ತೀವ್ರ ತಪಾಸಣೆ ಗೊಳಪಡಿಸಬೇಕು ಎಂದು ಸಲಹೆ ಮಾಡಿದರು.ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇ ಮತ್ತು ಲಾಡ್ಜ್‌ಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿ, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು ಎಂದರು.
ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ತನೋಜ್‌ಕುಮಾರ್ ನಾಯ್ಡು, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ನಿರ್ದೇಶಕರಾದ ಎಂ.ಆನಂದ್, ರವೀಂದ್ರನಾಥ ನಾಯ್ಡು, ವಿವೇಕ್, ರಾಘವೇಂದ್ರ, ಚಂದ್ರಶೇಖರ್, ಶಾಂತರಾಮ್ ಶೆಟ್ಟಿ ಹಾಜರಿದ್ದರು. 23 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರನ್ನು ನಿರ್ಬಂಧಿಸುವಂತೆ ಆಗ್ರಹಿಸಿ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಎಸ್ಪಿ ಡಾ. ವಿಕ್ರಂ ಅಮಟೆ ಅವರಿಗೆ ಮನವಿ ಸಲ್ಲಿಸಿದರು.